Wednesday, August 4, 2010

ಸಸ್ಯ ಸಂಪತ್ತಿನ ರಕ್ಷಣೆ ನಮ್ಮೇಲ್ಲರ ಜವಾಬ್ದಾರಿ: ಸಚಿವ ಪಾಲೇಮಾರ್

ಮಂಗಳೂರು,ಜುಲೈ04: ಸಸ್ಯ ವೈವಿಧ್ಯಕ್ಕೂ ಆಯುರ್ವೇದಕ್ಕೂ ನೇರ ಸಂಬಂಧವಿದೆ. ಗಿಡಮೂಲಿಕೆಗಳು ಆಯುರ್ವೇದದ ಜೀವಾಳ. ಮರ, ಗಿಡಗಳು ಹಿರಿಯರ ಬಳುವಳಿ. ಅವುಗಳನ್ನು ಪೋಷಿಸಿ ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ರಾಜ್ಯದ ಬಂದರು, ಪರಿಸರ, ಜೀವಿಶಾಸ್ತ್ರ ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ತಿಳಿಸಿದ್ದಾರೆ.ಅವರು ಪಶ್ಚಿಮಘಟ್ಟ ಕಾರ್ಯಪಡೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಹಮ್ಮಿಕೊಂಡ ಎನ್ಎಸ್ಎಸ್ ವಿದ್ಯಾರ್ಥಿಗಳ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಶಿಬಿರ ಹಾಗೂ ವೃಕ್ಷಾರೋಪಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಭಿವೃದ್ಧಿ ಕಾಮಗಾರಿ ಗಳಿಗಾಗಿ ಮರಗಳನ್ನು ಕಡಿಯ ಬೇಕಾಗುತ್ತದೆ. ಇಂತಹ ಸಂದರ್ಭ ಒಂದು ಮರಕ್ಕೆ ಪರ್ಯಯವಾಗಿ 10 ಗಿಡಗಳನ್ನು ನೆಟ್ಟು ಪೋಷಿಸು ವಂತಾಗಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜನತೆಯನ್ನು ಪ್ರೆರೇಪಿಸಬೇಕು ಎಂದ ಅವರು ಹೇಳಿದರಲ್ಲದೆ 2800 ಸಸ್ಯ ವೈವಿಧ್ಯಗಳಲ್ಲಿ ನಾವು ಕಳೆದು ಕೊಂಡಿದ್ದೇವೆ. ಅವುಗಳನ್ನು ಪುನಃ ಸ್ಥಾಪಿಸುವ ಕಾರ್ಯ ಆಗಬೇಕೆಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂದು ಮಾತನಾಡಿದ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನದಿ, ಕೊಳಗಳು ಅತ್ಯುತ್ತಮ ಜೀವ ವೈವಿಧ್ಯ ತಾಣಗಳಾಗಿವೆ. ನದಿಗಳು, ಅಲ್ಲಿರುವ ಕಾಂಡ್ಲ ವನಗಳು ಉಳಿಯಬೇಕು. ಇಂತಹ ಪ್ರಯತ್ನಗಳ ಅಂಗವಾಗಿ ಅಂಬಾರಗುಡ್ಡ, ಹೊಗೆರಿಕಾನಗಿರಿ ಮತ್ತು ನೇತ್ರಾಣಿ ದ್ವೀಪವನ್ನು ಜೀವ ವೈವಿಧ್ಯ ಮಂಡಳಿ ಅಪರೂಪದ ಪರಿಸರ ತಾಣವೆಂದು ಘೋಷಿಸಿದೆ ಎಂದು ಹೇಳಿದರು.ಸಮುದ್ರಕ್ಕೆ ನದಿಗಳು ಸೇರುವ ಇನ್ನಷ್ಟು ಪ್ರದೇಶಗಳನ್ನು ಅಪರೂಪದ ಪರಿಸರ ತಾಣಗಳ ಅಡಿಯಲ್ಲಿ ತರಬೇಕಾಗಿದೆ. ಹಸಿರು ವನ ಯೋಜನೆಯ ಅಡಿಯಲ್ಲಿ ಕರಾವಳಿಯಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನುಡಿದರು. ಜೀವವೈವಿಧ್ಯ ಮಂಡಳಿ ಆ.12ರಂದು ಬೆಂಗಳೂರಿನಲ್ಲಿ ಬೀಜ ವೈವಿಧ್ಯ ಸಂರಕ್ಷಣೆಗಾಗಿ ಚರ್ಚಿಸಲು ರೈತರ ಸಭೆಯೊಂದನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು ವಿ.ವಿಯ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ಮಾತನಾಡಿ ಈಗಾಗಲೇ ನಾವು ಶೇಕಡ 26 ರಷ್ಟು ಅರಣ್ಯ ಸಂಪತ್ತನ್ನು ಕಳೆದು ಕೊಂಡಿದ್ದೇವೆ. 2030ರ ವೇಳೆ ಈ ಪ್ರಮಾಣ ಶೇಕಡ 50 ಕ್ಕೇರಲಿದೆ. 2050ರ ವೇಳೆ ಪರಿಸರ ನಾಶದ ಪರಿಣಾಮವಾಗಿ ಗುಣಮಟ್ಟದ ನೀರಿಗೂ ತತ್ವಾರ ಬರಲಿದೆ ಎಂದು ಎಚ್ಚರಿಸಿದ ಅವರು ವೃಕ್ಷಾರೋಪಣದ ಮೂಲಕ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ 36ಲಕ್ಷ ಹೆಕ್ಟೇರ್ ಅರಣ್ಯ ನಿರ್ಮಿಸಲಾಗಿದೆ ಎಂದ ಅವರು ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವುದಕ್ಕಾಗಿ ವಿ.ವಿ.ವ್ಯಾಪ್ತಿಯಲ್ಲಿ `ಪರಿಸರ ಸೇವಾ ಶಿಬಿರ'ಗಳನ್ನು ನಡೆಸುವುದಾಗಿ ಪ್ರಕಟಿಸಿದರು.ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಸ್ವಾಗತಿಸಿದರು. ವಿ.ವಿ.ಯ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಗಣನಾಥ ಎಕ್ಕಾರ್ ವಂದಿಸಿದರು.