Tuesday, August 17, 2010

ಪಶುಸಂಗೋಪನ ಇಲಾಖೆಗೆ ಜಿಲ್ಲೆಯಲ್ಲಿ 407 ಹುದ್ದೆ ಮಂಜೂರು: ಸಚಿವ ಬೆಳಮಗಿ

ಮಂಗಳೂರು,ಆಗಸ್ಟ್ 17:ಪಶುಪಾಲನಾ ಇಲಾಖೆ 114 ಸಂಸ್ಥೆಗಳಿಗೆ ವಿವಿಧ ವೃಂದದ 407 ಹುದ್ದೆ ಮಂಜೂರಾಗಿದ್ದು ಇದರಲ್ಲಿ 189 ಭರ್ತಿಯಾಗಿದೆ ಉಳಿದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಪಶುಸಂಗೋಪನ ಸಚಿವ ರೇವು ನಾಯಕ್ ಬೆಳಮಗಿ ಹೇಳಿದ್ದಾರೆ.

ಇಂದು ನಗರದಲ್ಲಿ ಪಶು ಸಂಗೋಪನ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 218 ಹುದ್ದೆಗಳು ಖಾಲಿಯಿ ರುತ್ತದೆ.ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಮಟ್ಟದಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳ ಲಾಗುವುದು ಎಂದರು. ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆಯಡಿ 13 ಪಶು ಆಸ್ಪತ್ರೆ, 35 ಪಶು ಚಿಕಿತ್ಸಾಲಯಗಳು, 5 ಸಂಚಾರಿ ಪಶು ಚಿಕಿತ್ಸಾಲಯಗಳು, 55 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, ಇತರೆ 5, ಸೇರಿದಂತೆ ಒಟ್ಟು 114 ವಿವಿಧ ಪಶುವೈದ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರಿಸಿದರು.
ಈ ಪೈಕಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ದೊಡ್ಡ ರೋಗ ನಿವಾರಣಾ ಯೋಜನೆ, ಜಿಲ್ಲಾ ಕೋಳಿ ಸಾಕಾನಿಕೆ ಮತ್ತು ತರಬೇತಿ ಕೇಂದ್ರ, ಪುಲ್ಲೋರಂ ನಿಯಂತ್ರಣ ಘಟಕ ಹಾಗೂ ಹುಚ್ಚು ನಾಯಿ ನಿಯಂತ್ರಣ ಘಟಕವಿದ್ದು, ಪ್ರಾದೇಶಿಕ ಪ್ರಾಣಿ ರೋಗ ತಪಾಸಣಾ ಪ್ರಯೋಗಾಲಯ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗಗಳಿದ್ದು, ಪಶುಸಂಗೋಪನೆಗೆ ಪೂರಕ ಸೌಲಭ್ಯಗಳನ್ನು ನೀಡಲಾಗಿದೆ. ಅಭಿವೃದ್ಧಿ ಪ್ರಸ್ತಾವನೆಗಳು ಬಂದರೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅಖಿಲ ಭಾರತ 18ನೇ ಜಾನುವಾರು ಗಣತಿ (2007)ರ ಮೇರೆಗೆ ಜಿಲ್ಲೆಯಲ್ಲಿ 3,97,601 ದನಗಳು, 15,127 ಎಮ್ಮೆಗಳು, 316 ಕುರಿಗಳು, 25,694 ಮೇಕೆಗಳು, 5,332 ಹಂದಿಗಳು, 2,22,057 ನಾಯಿಗಳು, 992 ಇತರೆ ಸೇರಿದಂತೆ 6,67,124 ಜಾನುವಾರು ಗಳಿದ್ದು, 7,74,882 ಕುಕ್ಕುಟಗಳಿರುತ್ತವೆ. ಹೈನುವೃದ್ಧಿ, ಸಾಂಕ್ರಾಮಿಕ ರೋಗತಡೆ, ಮೇವು ಅಭಿವೃದ್ಧಿ, ಪ್ರಾಣಿ ಸಾಕಾಣಿಕೆಗೆ ಸಂಬಂಧಿ ಸಿದಂತೆ ತಾಂತ್ರಿಕ ಸಲಹೆ ನೀಡುವುದು, ಜಾನುವಾರು ರೋಗ ನಿಯಂತ್ರಣಕ್ಕೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಕಟ್ಟೆಚ್ಚರ ವಹಿಸುವಿಕೆ ಸೇರಿದಂತೆ ಜಿಲ್ಲೆಯಲ್ಲಿ ಪಶು ಸಂಗೋಪನೆಗೆ 2010-1 ನೇ ಸಾಲಿನಲ್ಲಿ ಒಟ್ಟು 186.97 ಲಕ್ಷ ರೂ., ಅನುದಾನ ಕಲ್ಪಿಸಲಾಗಿದೆ ಎಂದು ಸಚಿವರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.ಅಮೃತ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ 777 ಅಬಲ ಮಹಿಳೆಯರಿಗೆ ತಲಾ ರೂ. 0.20 ಲಕ್ಷ ಘಟಕ ವೆಚ್ಚದಂತೆ ಒಟ್ಟು 80.69 ಲಕ್ಷ ಸಹಾಯನುದಾನ ಹೈನುಗಾರಿಕೆಗೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 1,432 ಪಶುವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, 972 ವೈದ್ಯರಕೊರತೆ ಇದೆ ಎಂದರು. 480 ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದರು. 642 ಪಶು ವೈದ್ಯ ಸಹಾಯಕರನ್ನು ನೇಮಕ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪನಿರ್ದೇಶಕ ಡಾ. ಕೆ.ವಿ. ಹಲಗಪ್ಪ, ಕೊಯ್ಲಾ ಫಾರಂ ನ ಡಾ. ಕೆ. ವೆಂಕಟೇಶ್, ಸಚಿವರ ವಿಶೇಷಾಧಿಕಾರಿ ಡಾ. ಜಯಪ್ರಕಾಶ್ ಉಪಸ್ಥಿತರಿದ್ದರು.