Wednesday, August 4, 2010

ಆಗಸ್ಟ್ 15ರಂದು ಅರಣ್ಯವಾಸಿಗಳಿಗೆ ಹಕ್ಕುಪತ್ರ: ಜಿಲ್ಲಾಧಿಕಾರಿ ಪೊನ್ನುರಾಜ್

ಮಂಗಳೂರು,04: ಸುಳ್ಯ, ಪುತ್ತೂರು, ಬೆಳ್ತಂಗಡಿಯ ಅರಣ್ಯ ವಾಸಿ ಪರಿಶಿಷ್ಟ ವರ್ಗಕ್ಕೆ ಸೇರಿದವರಿಂದ ಹಕ್ಕು ಪತ್ರಕ್ಕೆ ಸಂಬಂಧಿಸಿ 1600 ಅರ್ಜಿಗಳನ್ನು ಸ್ವೀಕರಿಸಿ ಇತ್ಯರ್ಥ ಪಡಿಸಲಾಗಿದೆ. ಇವರಲ್ಲಿ 248 ಪರಿಶಿಷ್ಟ ವರ್ಗಕ್ಕೆ ಸೇರಿದ ಅರ್ಜಿಗಳನ್ನು ಪುರಸ್ಕರಿಸಿ ಆಗಸ್ಟ್ 15 ರಂದು ಹಕ್ಕು ಪತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪೊನ್ನು ರಾಜ್ ಹೇಳಿದರು.ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಗೇರು, ಕೋಕೋ, ಕಾಳು ಮೆಣಸು ಬೆಳೆಗೆ ಸಹಾಯಧನ ನೀಡಲಾಗುವುದು. ನೀರು ಸಂಗ್ರಹ ಘಟಕಗಳಿಗೆ, ಜೇನು ಸಾಕಾಣಿಕೆಗೆ ಬ್ಯಾಂಕ್ ಮೂಲಕ ಶೇಕಡ 40 ರ ಸಹಾಯಧನ ಸೇರಿದಂತೆ ತುಂಬೆಯಲ್ಲಿ 77 ಲಕ್ಷ ರೂ. ವೆಚ್ಚದಲ್ಲಿ ನೀರಾ ಸಂಸ್ಕರಣ ಘಟಕ ಹಾಗೂ 17 ಲಕ್ಷ ರೂ. ವೆಚ್ಚದಲ್ಲಿ ಸೇವಾ ಕೇಂದ್ರ ತೆರೆಯಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕರು ಮಾಹಿತಿ ನೀಡಿದರು. ಜೈವಿಕ ಗೊಬ್ಬರ, ಕೀಟನಾಶಕಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು. ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಈ ಸಂಬಂಧ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಮಪ್ರಸಾದ್ ಅವರು ಸೂಚಿಸಿದರು. ಕೃಷಿ ಜಂಟಿ ಆಯುಕ್ತರು ಮಾಹಿತಿ ನೀಡಿ ಜಿಲ್ಲೆಯ 17 ರೈತ ಸಂಪರ್ಕ ಕೇಂದ್ರಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಕೃಷಿ ಅಧಿಕಾರಿಗಳಿದ್ದು, ಉಳಿದೆಡೆ ಅಧಿಕಾರಿಗಳ ಕೊರತೆ ಇದೆ ಎಂದರು. ಆತ್ಮ ಯೋಜನೆಯಡಿ ಆಸಕ್ತ ಹಾಗೂ ಅರ್ಹ ರೈತರಿಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದರು.ಕಳೆದ ಸಾಲಿನಲ್ಲಿ 32.583 ಹೆಕ್ಟೇರ್ ಭತ್ತದ ನಾಟಿಯಾಗಿದ್ದು, ಈ ಸಾಲಿನಲ್ಲಿ ಇಂದಿಗೆ 30,534 ಹೆಕ್ಟೇರ್ ಭತ್ತ ನಾಟಿಯಾಗಿದೆ ಎಂದರು.
ಮೀನುಗಾರಿಕೆ ಇಲಾಖೆ ಇದುವರೆಗೆ 2,225 ಮೀನುಗಾರಿಕಾ ದೋಣಿಗಳ ರಿಜಿಸ್ಟ್ರೇಷನ್ ಮುಗಿಸಿದೆ. ಮೀನುಗಾರಿಕಾ ದೋಣಿಗಳಿಗೆ ಸೀಮೆ ಎಣ್ಣೆ ಕೊಡುವ ಬಗ್ಗೆಯೂ ಯಾವುದೇ ಗೊಂದಲಗಳಿಲ್ಲದೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯೊಂದಿಗೆ ಸಂವಹನ ಹಾಗೂ ಸಮನ್ವಯ ಸಾಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.