Friday, August 20, 2010

ಬಡವರಿಗೆ ನೆರವಾಗಿ: ಅಧಿಕಾರಿಗಳಿಗೆ ಜಿ.ಪಂ ಅಧ್ಯಕ್ಷರ ಕರೆ

ಮಂಗಳೂರು, ಆಗಸ್ಟ್ 20: ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದವರಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ನೆರವಾಗಲು ಕಾನೂನು ಮೀರಿ ಅಧಿಕಾರಿಗಳು ಸ್ಪಂದಿಸಿ ಪ್ರೋತ್ಸಾಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಅವರಿಂದು ತಾಲೂಕು ಪಂಚಾಯತ್ ಮಂಗಳೂರು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಅವರ 95 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ರಾಜಕೀಯ ಜೀವನವಿರುವುದು ಸಮಾಜ ಸೇವೆ ಮಾಡಲು ಎಂಬುದನ್ನು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸ್ ಅವರು ತೋರಿಸಿ ಕೊಟ್ಟಿದ್ದಾರೆ. ತಮ್ಮ 30 ವರ್ಷದ ರಾಜಕೀಯ ಜೀವನಕ್ಕೆ ಸ್ಫೂರ್ತಿ ಅವರು ಎಂದ ಅಧ್ಯಕ್ಷರು, ಭೂ ಸುಧಾರಣೆ ಕಾಯಿದೆ ಜಾರಿಗೆ ತಂದು ಉಳುವ ವನನ್ನು ಭೂಮಿಗೆ ಒಡೆಯನಾಗಿ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದರು. ನಮ್ಮ ರಾಜ್ಯ ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ಯಾಗಿದೆ ಎಂದ ಅವರು, ಜನಪರ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಅರಸ್ ಅವರು ಹಾಕಿದ ಯೋಜನೆಗಳೇ ಇಂದಿನ ಮುಖ್ಯ ಮಂತ್ರಿಗಳಿಗೂ ಮಾದರಿ. ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ಕಾರ್ಯಕ್ರಮಗಳನ್ನು ನೀಡಿದ ಅರಸ್ ಅವರು, ಬಿಸಿಎಂ ಹಾಸ್ಟೆಲ್ ಗಳ ಮುಖಾಂತರ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸಲು ನೀಡಿದ ಕೊಡುಗೆ ಅನನ್ಯ ಎಂದರು. ಇಂದು ರಾಜ್ಯ ಸರ್ಕಾರ ಇದೇ ಮಾದರಿಯನ್ನು ಮುಂದಿಟ್ಟು ಹಲವು ಯೋಜನೆಗಳನ್ನು ರೂಪಿಸಿದೆ. ಸರ್ವ ಶಿಕ್ಷಣ ಅಭಿಯಾನದಡಿ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ 30 ಕೋಟಿ ರೂ. ಬಿಡುಗಡೆಯಾಗಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ನಿಗಮದಲ್ಲೂ ಸಾಕಷ್ಟು ಅನುದಾನವಿದ್ದು, ಮಕ್ಕಳಿಗೆ ಸೌಲಭ್ಯ ದೊರಕಿಸಲು ಶಿಕ್ಷಕರು ಆಸಕ್ತಿ ವಹಿಸಬೇಕು ಎಂದರು. ಇಂದು ನಡೆದ ಸಮಾರಂಭದಲ್ಲಿ ಬಿಸಿಎಂ ಹಾಸ್ಟೆಲ್ ನಲ್ಲಿ 32 ವರ್ಷ ಅಡುಗೆ ಮಾಡಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜಯಂತಿ ಅವರನ್ನು ಸನ್ಮಾನಿಸಲಾಯಿತು. ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ದೇವರಾಜ್ ಸಿ ಪಿ ಮತ್ತು ನಾರಾಯಣ ಎಂ ಎಸ್ ಅವರು ಪರೀಕ್ಷೆ ಕಾರಣ ಗೈರು ಹಾಜರಾಗಿದ್ದು, ಡಿ ಎಡ್ ನಲ್ಲಿ ಶೇ. 86.5 ಅಂಕಗಳಿಸಿದ್ದ ಸಂದೇಶ್ ಎಚ್ ಅವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ, ನಿಗಮದಿಂದ ಮೂವರು ಫಲಾನು ಭವಿಗಳಿಗೆ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಮಂಗಳೂರು ತಾಲೂಕಿನ ವಿದ್ಯಾರ್ಥಿಗಳಿಗೆ 8 ಲಕ್ಷ ರೂ., ಅನುದಾನ ದೊರಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 56 ವಿದ್ಯಾರ್ಥಿ ನಿಲಯಗಳಿದ್ದು, 5,015 ವಿದ್ಯಾರ್ಥಿಗಳಿದ್ದಾರೆ. 7 ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 1,450 ವಿದ್ಯಾರ್ಥಿ ಗಳಿದ್ದಾರೆ. ಕಳೆದ ಸಾಲಿನಲ್ಲಿ 20,000 ವಿದ್ಯಾರ್ಥಿಗಳಿಗೆ 69 ಲಕ್ಷ ರೂ. ವಿದ್ಯಾರ್ಥಿ ವೇತನ ಹಾಗೂ 23,303 ವಿದ್ಯಾರ್ಥಿಗಳಿಗೆ ಒಂದು ಕೋಟಿ 38ಲಕ್ಷ ರೂ. ಶುಲ್ಕ ವಿನಾಯಿತಿಯನ್ನು ನೀಡಲಾಗಿದೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿಸ್ತರಣಾಧಿಕಾರಿ ಸಿ.ಎಚ್. ರಾಮು ಅವರು ಮಾಹಿತಿ ನೀಡಿದರು.
ಸಮಾರಂಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಮಚಂದ್ರಕುಂಪಲ, ಉಪಾಧ್ಯಕ್ಷರಾದ ಶ್ರೀಯಾಳ ಜೆ. ಹೆಗ್ಡೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ, ಮಾಜಿ ಅಧ್ಯಕ್ಷ ಗೋಕುಲ್ ದಾಸ್ ಶೆಟ್ಟಿ, ಸದಸ್ಯ ಮಹಮದ್ ಸಿರಾಜ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಎಸ್. ಎಸ್. ಕಾಳೆ, ಉಪಸ್ಥಿತರಿದ್ದರು.ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್ ಪೂಜಾರಿ ಸ್ವಾಗತಿಸಿದರು. ಹೇಮಂತ ಕಾರ್ಯಕ್ರಮ ನಿರ್ವಹಿಸಿದರು.