Friday, August 13, 2010

ಗಣಿಗಾರಿಕೆ ನಿಷೇಧದಿಂದ ರಾಜ್ಯದ ಕಾರ್ಖಾನೆಗಳಿಗೆ ಅನುಕೂಲ:ಸಿ ಎಂ ಯಡಿಯೂರಪ್ಪ

ಮಂಗಳೂರು,ಆ. 13:ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ನಿಲುವಿನಿಂದ ದೂರಗಾಮಿ ಪರಿಣಾಮಗಳು ಹಾಗೂ ಪ್ರಯೋಜನಗಳು ದೇಶಕ್ಕೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ಅವರಿಂದು ಕುದುರೆಮುಖ ಸಂಸ್ಥೆಯಲ್ಲಿ ಕಚ್ಚಾ ಸಾಮಗ್ರಿ ಸಂಗ್ರಹಣಾ ಮತ್ತು ವಿಸ್ತರಣಾ ಘಟಕದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. 8000ಟನ್ ಸಾಮರ್ಥ್ಯದ ಅದಿರು ಸಂಗ್ರಹಣಾ ಸಾಮರ್ಥ್ಯದ ಕಣಜವೊಂದನ್ನು ಸ್ಥಾಪಿಸಲು ಕೈಗೊಂಡ ಕ್ರಮ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿರುವುದು ಸಾಕ್ಷಿ ಎಂದ ಅವರು, ಕಂಪೆನಿಯವರು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು. ಅದಿರು ಸಮೃದ್ಧ ದೇಶಗಳು ತಮ್ಮ ದೇಶದ ಬಹುಮೂಲ್ಯ ಸೊತ್ತನ್ನು ಸಂರಕ್ಷಿಸುತ್ತಿದ್ದು, ಭಾರತ ಮಾತ್ರ ಇದಕ್ಕೆ ಹೊರತಾಗಿದೆ. ಇಲ್ಲಿ ವೈಯಕ್ತಿಕ ನೆಲೆಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದರಿಂದ ರಾಜ್ಯ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದಲ್ಲದೆ ನಮ್ಮ ಮುಂದಿನ ಜನಾಂಗ ತೊಂದರೆಯನ್ನು ಅನುಭವಿಸಲಿದೆ.ಹಾಗಾಗಿ ಇಂದು ಈ ಸಂಬಂಧ ನಡೆಯುತ್ತಿರುವ ಚರ್ಚೆಗಳು ಹಾಗೂ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಥಮಗಳು ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲು ಪ್ರೇರಣೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ರಾಜ್ಯ ಸ್ವಾಮ್ಯದಲ್ಲಿರುವ 10 ಬಂದರಿನಿಂದ ಗಣಿ ರಫ್ತನ್ನು ನಿಷೇಧಿಸಲಾಗಿದೆ. ಗಣಿ ನೀತಿಯನ್ನು ರೂಪಿಸಿ ಅನುಷ್ಠಾನಕ್ಕೆ ತರಲು ತಮ್ಮ ಸರ್ಕಾರ ಬದ್ಧವಾಗಿದ್ದು, ತಮ್ಮ ಆಡಳಿತದಲ್ಲಿ ಯಾರಿಗೂ ಗಣಿಗಾರಿಕೆಗೆ ಅವಕಾಶ ನೀಡಿಲ್ಲ; ಮೌಲ್ಯ ವರ್ಧಿತ ಉತ್ಪಾದನೆಗೆ ಮಾತ್ರ ಅವಕಾಶ ನೀಡಿದೆ ಎಂದು ಸ್ಪಷ್ಟ ಪಡಿಸಿದರು. ನಮ್ಮ ರಾಜ್ಯದ ಕಾರ್ಖಾನೆಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡದೆ ವ್ಯಕ್ತಿಗಳಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದ ಮುಖ್ಯಮಂತ್ರಿಗಳು, ಕಂಪೆನಿಗಳಿಗೆ ಅವಕಾಶ ನೀಡುವ ಬಗ್ಗೆ ದೃಢ ನಿರ್ಧಾರ ತಳೆಯುವುದಾಗಿ ಪ್ರಕಟಿಸಿದರು. ಪ್ರಧಾನಮಂತ್ರಿ ಈ ಸಂಬಂಧ ಸೂಕ್ತ ಮಾರ್ಗದರ್ಶನ ನೀಡಿ ಗಣಿಗಾರಿಕೆಯಲ್ಲಾಗಿರುವ ಲೋಪಗಳನ್ನು ಸರಿಪಡಿಸುವ ಭರವಸೆ ಇದೆ ಎಂದು ಅವರು ಹೇಳಿದರು. ಭಾರತ ಸರ್ಕಾರದ ಉಕ್ಕು ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಆರ್ಥಿಕ ಸಲಹೆಗಾರರಾದ ಮಚ್ಛ್ಯೇಂದ್ರನಾಥ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಖಾನೆಗಳಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಬೇಕು.ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವಿಗೆ ಸಂತಸವ್ಯಕ್ತಪಡಿಸಿದರು. ಸರ್ಕಾರ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳ ಅಭಿವೃದ್ಧಿಗೆ ಸಾಕಷ್ಟು ಬಂಡವಾಳ ಹೂಡಿದ್ದು, ಗಣಿಗಾರಿಕೆ ಅಧಿಕಾರ ಕಂಪೆನಿಗೆ ನೀಡುವುದರಿಂದ ಅನುಕೂಲವಾಗಲಿದೆ ಎಂದರು. ಕೆಐಒಸಿಲ್ ನ ಕಾರ್ಯನಿರ್ವಾಹಕ ನಿರ್ದೇಶಕ ಎನ್. ಕೃಷ್ನ ಭಟ್ ಸ್ವಾಗತಿಸಿದರು. ಎಂ ಬಿ ಪಡಿಯಾಲ್ ವಂದಿಸಿದರು. ವ್ಯವಸ್ಥಾಪಕ ನಿರ್ದೇಶಕ ರಂಗನಾಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಲಾನ್ಯಾಸ ಸಮಾರಂಭದಲ್ಲಿ ಗೃಹಸಚಿವ ಡಾ. ವಿ.ಎಸ್. ಆಚಾರ್ಯ, ಸಣ್ಣ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಶಾಸಕ ಯೋಗೀಶ್ ಭಟ್, ಸಂಸದರಾದ ಡಿ.ವಿ ಸದಾನಂದ ಗೌಡ, ಗಣೇಶ್ ಕಾರ್ಣಿಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಮೇಯರ್ ರಜನಿದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಉಪಸ್ಥಿತರಿದ್ದರು.