Tuesday, August 24, 2010

ದ. ಕ ಅಭಿವೃದ್ಧಿಗೆ ಸಾವಿರ ಕೋಟಿ ರೂ.: ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಆಗಸ್ಟ್ 24: ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಲು ಜಿಲ್ಲೆಯ ಅಭಿವೃದ್ಧಿಗೆ ಸಾವಿರ ಕೋಟಿ ರೂ.ಗಳನ್ನು ನೀಡಲಾಗುವುದು. ಮುಂದಿನ ಮೂರು ವರ್ಷ ಅಭಿವೃದ್ಧಿ ಕಾರ್ಯಕ್ಕೆ ಹಣದ ತೊಡಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ಅವರಿಂದು ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಬಂಟ್ವಾಳ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾ ಡುತ್ತಿದ್ದರು. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರಲ್ಲದೆ ಸ್ಥಳೀಯ ಶಾಸಕರ ಬೇಡಿಕೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಅಗತ್ಯಕ್ಕನುಸಾರ ಹಣ ಹಾಗೂ ನೆರವು ಯೋಜನೆಗಳನ್ನು ಪ್ರಕಟಿಸಿದರು.
ಜಿಲ್ಲೆಯ ಕಾಲು ಸಂಕ ನಿರ್ಮಾಣಕ್ಕೆ ಐದು ಕೋಟಿ ನೆರವು ಪ್ರಕಟಿಸಿದ ಮುಖ್ಯಮಂತ್ರಿಗಳು, ಬಂಟ್ವಾಳ-ಬೆಳ್ತಂಗಡಿಗೆ ಕುಡಿಯುವ ನೀರಿಗಾಗಿ ಚೆಕ್ ಡ್ಯಾಮ್ ನಿರ್ಮಾಣ ಯೋಜನೆ ರೂಪಿಸಲು ಹೇಳಿದರು. ಮುಂದಿನ ವರ್ಷ ಕಾಲ ರಾಜ್ಯದಲ್ಲಿ ವಿದ್ಯುತ್ ಅಭಾವ ನೀಗಿಸಲು ನಿರಂತರ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿಸುವುದಾಗಿ ಹೇಳಿದ ಅವರು, ದೂರಾಲೋಚನೆ ಇಲ್ಲದ ಯೋಜನೆಗಳಿಂದ ರಾಜ್ಯ ಇಂದು ವಿದ್ಯುತ್ ಅಭಾವ ಎದುರಿಸುತ್ತಿದೆ ಎಂದರು. ಈಗಾಗಲೇ ರಾಜ್ಯದಲ್ಲಿ 13,000 ಮೆವ್ಯಾ ವಿದ್ಯುತ್ ಉತ್ಪಾದನೆಗೆ ರಾಜ್ಯ ಸನ್ನದ್ಧವಾಗಿದೆ. ಮುಂದಿನ ಮೂರು ವರ್ಷದಲ್ಲ 5,000 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುವುದು ಎಂದರು. ಬಂಟ್ವಾಳ ತಾಲೂಕೊಂದರಲ್ಲೇ 37,211 ಫಲಾನುಭವಿಗಳು ರಾಜ್ಯ ಸರ್ಕಾರ ರೂಪಿಸಿದ ವಿವಿಧ ಯೋಜನೆಗಳ ನೆರವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 9ಲಕ್ಷ ಹೆಣ್ಣು ಮಕ್ಕಳು ಸೇರ್ಪಡೆಗೊಳಿಸಲಾಗಿದೆ. ಈ ಯೋಜನೆ ವ್ಯಾಪ್ತಿಗೆ ಬರುವ ಅಮ್ಮ ಮಗುವಿಗೆ ಆರೋಗ್ಯ ಕಾರ್ಡ್ ನೀಡುವ ಬಗ್ಗೆಯೂ ಯೋಜನೆ ರೂಪಿಸಿದೆ ಎಂದರು.ತಾಲೂಕು ಆಸ್ಪತ್ರೆಯ ಟ್ರೌಮಾ ಕೇಂದ್ರ, ಅಗ್ನಿ ಶಾಮಕ ಠಾಣೆ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ಮಂಗಳೂರು ವಿದ್ಯುತ್ ಕಂಪೆನಿ ನಿಯಮಿತ ಇದರ ವಿಭಾಗೀಯ ಕಾರ್ಯಾಲಯ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ವಾಮದ ಪದವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯ ಬಳಿಕ ಶಿಕಾರಿ ಪುರವನ್ನು ಸ್ಮರಿಸಿದ ಮುಖ್ಯ ಮಂತ್ರಿಗಳು, ವಾಮದಪದವು ಅಂತಹ ಆತ್ಮೀಯ ತೆಯನ್ನು, ಇಲ್ಲಿನ ಆಸ್ಪತ್ರೆ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಯಾಗಿರುವು ದಾಗಿಯೂ ತುಂಬು ಹೃದಯದಿಂದ ನುಡಿದರು. ಆಸ್ಪತ್ರೆಯ ಪೀಠೋ ಪಕರಣಕ್ಕೆ ತಕ್ಷಣವೇ 10 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು. ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ಇನ್ನೂ ನನಸಾಗದ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು ಕುಗ್ರಾಮಗಳ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವುದಾಗಿ ನುಡಿದರು. ಹೈನು ಗಾರಿಕೆಯಲ್ಲಿ ಗುಜರಾತ್ ನಂತರ ನಮ್ಮ ರಾಜ್ಯವಿದ್ದು, ರಾಜ್ಯವನ್ನು ಪ್ರಥಮ ಸ್ಥಾನಕ್ಕೊಯ್ಯಲು ಪೂರಕ ನೆರವು ಹಾಗೂ ಪ್ರೋತ್ಸಾಹ ಹೈನುಗಾರಿಕೆಗೆ ನೀಡುವು ದಾಗಿ ಹೇಳಿದರು. ಅಧ್ಯಕ್ಷತೆ ಸ್ಥಳೀಯ ಶಾಸಕ ರಮಾನಾಥ ರೈ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ,ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯೋಗೀಶ್ ಭಟ್, ಯು ಟಿ ಖಾದರ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ತಾ.ಪಂ. ಅಧ್ಯಕ್ಷ ಬಾಬು ಎಂ, ಉಪಾಧ್ಯಕ್ಷ ಚಂದ್ರಹಾಸ ಕರ್ಕೆರಾ, ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಸಮಾರಂಭದಲ್ಲಿ ಉಪಸ್ಥಿತರಿದ್ದರು.