Wednesday, August 15, 2012

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 66 ನೇ ಸ್ವಾತಂತ್ರ್ಯ ಸಂಭ್ರಮಾಚರಣೆ;ಜಿಲ್ಲಾ ಉಸ್ತುವಾರಿ ಸಚಿವರಿಂದ ಸಂದೇಶ

66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಈ ಶುಭ ಸಮಾರಂಭದಲ್ಲಿ ಉಪಸ್ಥಿತರಿರುವ ಲೋಕಸಭಾ ಸದಸ್ಯರೇ, ಜಿಲ್ಲೆಯ ಎಲ್ಲಾ ವಿಧಾನ ಸಭಾ ಸದಸ್ಯರೇ, ವಿಧಾನ ಪರಿಷತ್ತು ಸದಸ್ಯರೇ, ಸರಕಾರದ ವಿವಿಧ ಅಭಿವೃದ್ಧಿ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರುಗಳೇ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರೆ, ಸ್ವಾತಂತ್ರ್ಯ ಹೋರಾಟಗಾರರೇ, ವಿವಿಧ ಇಲಾಖಾ ಅಧಿಕಾರಿಗಳೇ, ಮಾಧ್ಯಮ ಮಿತ್ರರೇ, ಪ್ರಶಸ್ತಿ ವಿಜೇತರೇ, ಶಾಲಾ ವಿದ್ಯಾರ್ಥಿಗಳೇ, ಪಥಸಂಚಲನದಲ್ಲಿ ಭಾಗವಹಿಸುವ ವಿವಿಧ ತಂಡಗಳ ಸದಸ್ಯರೇ ಹಾಗೂ ಸಮಸ್ತ ನಾಗರಿಕ ಬಂಧುಗಳೇ ನಿಮಗೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಉಲ್ಲಾಸ ಹಾಗೂ ಸಡಗರದಿಂದ ಆಚರಿಸಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ.
ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಲು ನಡೆದ ಸುದೀರ್ಘ ಹೋರಾಟ, ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರ ಸ್ಮರಣೆ ಮತ್ತು ಸ್ವತಂತ್ರ ಭಾರತದ ಆರು ದಶಕಗಳಿಗಿಂತ ಹೆಚ್ಚಿನ ಅವಧಿಯ ಸಾಧನೆಗಳ ಪುನರವಲೋಕನ, ಭವಿಷ್ಯತ್ತಿನಲ್ಲಿ ಪ್ರತೀ ಭಾರತೀಯನ ಜವಾಬ್ದಾರಿಯನ್ನು ನೆನಪಿಸುವ ಮಹತ್ತರ ಉದ್ದೇಶಗಳು ಈ ಸ್ವಾತಂತ್ರ್ಯೋತ್ಸವದ್ದು.
ಈ ದೇಶವು ವಿಭಿನ್ನ ಸಂಸ್ಕೃತಿ, ಧರ್ಮ, ಜಾತಿ, ಪ್ರಾದೇಶಿಕ ಭಿನ್ನತೆಯಿಂದ ಕೂಡಿದ್ದರೂ ನಾವೆಲ್ಲರೂ ಭಾರತೀಯರು. ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ ಸ್ವಾತಂತ್ರ್ಯದೊಡನೆ ಸಾಮಾಜಿಕ ಸ್ಥಾನಮಾನಗಳು, ಆರ್ಥಿಕ ಸ್ವಾತಂತ್ರ್ಯ, ಸ್ವಾವಲಂಬಿಯಾಗಿ ಬದುಕಲು ಅನುಕೂಲಕರವಾದ ವಾತಾವರಣ ದೊರೆಯುವಂತಾದರೆ ಸ್ವಾತಂತ್ರ್ಯವೆಂಬ ಪರಿಕಲ್ಪನೆ ಅರ್ಥಪೂರ್ಣವಾದೀತು. ಸಂಪದ್ಭರಿತವಾಗಿದ್ದ ನಮ್ಮ ದೇಶ ಪರಕೀಯರ ದಾಳಿಗೆ ತುತ್ತಾಗಿದ್ದರೂ ತನ್ನ ಅಂತ:ಸತ್ವವನ್ನು ಕಳೆದುಕೊಳ್ಳಲಿಲ್ಲ, ಆಧ್ಯಾತ್ಮಿಕ ತಳಹದಿಯ ಮೇಲೆ ಸುಭದ್ರವಾಗಿ ನಿಂತಿರುವ ಭವ್ಯ ಭಾರತದತ್ತ ಇಂದಿಗೂ ಜಗತ್ತು ಅಪಾರ ನಿರೀಕ್ಷೆಯಿಂದ ನೋಡುತ್ತಿದೆ. ಇದು ಹುಸಿಯಾಗದಿರಲೆಂಬ ಹಾರೈಕೆ ನಮ್ಮದು.
ಮಹಾತ್ಮ ಗಾಂಧಿಯವರ ಮಾತಿನಲ್ಲಿ - 'ತ್ಯಾಗದ ನಿಯಮ ಜಾಗತಿ ಕವಾಗಿ ಒಂದೇ ಆಗಿದ್ದರೂ ವೀರರು, ಶೂರರು ಕಳಂಕರಹಿತರ ತ್ಯಾಗ ಪರಿಣಾ ಮಕಾರಿ ಯಾದುದು'
ಕರ್ನಾಟಕದಲ್ಲಿ, ಜನಾದೇಶ ಪಡೆದ ಭಾರತೀಯ ಜನತಾ ಪಾರ್ಟಿ, ಇಂದಿಗೆ 4 ವರ್ಷ 2 ತಿಂಗಳ ಯಶಸ್ವಿ ಆಡಳಿತ ನಡೆಸಿದೆ. ತನ್ಮದ್ಯೆ ಉಂಟಾದ ರಾಜಕೀಯ ಸವಾಲುಗಳನ್ನು ಎಲ್ಲರಿಗೂ ಮಾದರಿಯಾಗುವಂತೆ ಪ್ರಜಾಪ್ರಭುತ್ವದ ಹಾದಿಯಲ್ಲೇ ಪರಿಹರಿಸಿಕೊಂಡು ರಾಜ್ಯದ ಮಹಾಜನತೆ ಕಂಡ ಕರ್ನಾಟಕ ರಾಜ್ಯದ ಪ್ರಗತಿಯ ಕನಸನ್ನು ನನಸಾಗಿಸಲು ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ್ರವರ ಸಾರಥ್ಯದಲ್ಲಿ ನಾವೀಗ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದೇವೆ.

ಒಂದು ರಾಜ್ಯದ ಸಮಗ್ರ ಅಭಿವೃದ್ಧಿ ಎಂದರೆ ಮೂಲಸೌಲಭ್ಯಗಳ ಅಭಿವೃದ್ದಿ. ಮೂಲಸೌಲಭ್ಯಗಳ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯ. ಉತ್ತಮ ರಸ್ತೆಗಳು, ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಅತಿವೇಗದ ಇಂಟರ್ ನೆಟ್ ಸಂಪರ್ಕ ಸೌಲಭ್ಯ, ಸುಸ್ಥಿರ ಇಂಧನ ಪೂರೈಕೆ, ಗುಣಮಟ್ಟದ ಕುಡಿಯುವ ನೀರಿನ ಲಭ್ಯತೆ, ಎಲ್ಲರಿಗೂ ಶಿಕ್ಷಣ, ಆರೋಗ್ಯ ಸೌಲಭ್ಯ, ಸ್ಥಳೀಯವಾಗಿ ಉದ್ಯೋಗ, ರೈತಪರ ಬಲಿಷ್ಠ ಮಾರುಕಟ್ಟೆ ವ್ಯವಸ್ಥೆ ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢವಾದ ಹೆಜ್ಜೆಯನ್ನು ಇರಿಸಿದೆ.
ನೀಲಿ ಹಸಿರಿನ ಬಂದರು ನಗರಿ, ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆಯನ್ನು ಹೊಂದಿರುವ ಮಂಗಳೂರು ರಾಜ್ಯದ ಹೆಮ್ಮೆ. ನೇತ್ರಾವತಿ, ಫಲ್ಗುಣಿ ನದಿಗಳು ಹರಿಯುತ್ತಿರುವ ಪಶ್ಚಿಮ ಕರಾವಳಿಯ ತಪ್ಪಲಿನಲ್ಲಿರುವ ನಮ್ಮ ಜಿಲ್ಲೆ ದೇಶದಲ್ಲೇ ಗುರುತಿಸಲ್ಪಟ್ಟ ಶೈಕ್ಷಣಿಕ ಕೇಂದ್ರ. ಬ್ಯಾಂಕಿಂಗ್ ನ ತವರೂರು. ಜಾತ್ಯತೀತ ಭಾರತದ ವೈವಿಧ್ಯತೆಯನ್ನು ನಾವಿಲ್ಲಿ ಕಾಣಬಹುದು. ತುಳು, ಕೊಂಕಣಿ, ಬ್ಯಾರಿ ಭಾಷೆಯನ್ನಾಡುವ ಭಾಷಾ ವೈವಿಧ್ಯದ ತವರೂರು ಮಂಗಳೂರು. ಹಲವು ಜಾತಿ, ಧರ್ಮಗಳ, ಭಾಷೆಗಳನ್ನಾಡುವ ಜನರು ಇಲ್ಲಿ ಮಂಗಳೂರಿನ ಅಭಿವೃದ್ಧಿಗೆ ಗಮನೀಯ ಕೊಡುಗೆಗಳನ್ನು ನೀಡಿದ್ದಾರೆ. ಸಾಮರಸ್ಯದ ಬದುಕಿಗೆ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ.
16ನೇ ಶತಮಾನದಲ್ಲೇ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಸ್ವಾತಂತ್ರ್ಯದ ಕಿಚ್ಚನ್ನು ಪ್ರಥಮವಾಗಿ ಹಚ್ಚಿದ ಪ್ರದೇಶವಿದು. ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯಕ್ಕಾಗಿ ಆಕೆ ಮಾಡಿದ ಹೋರಾಟ ಇಂದಿಗೂ ಮಾದರಿ. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಒಡನಾಡಿಯಾಗಿ ಅವರ ಮಂತ್ರಿಮಂಡಲದಲ್ಲಿ ಆರ್ಥಿಕ ಸಚಿವರಂತೆ ಕರ್ತವ್ಯ ನಿರ್ವಹಿಸಿದ ಹೋರಾಟಗಾರ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ದಕ್ಷಿಣ ಕನ್ನಡದವರೆ. ಬ್ರಿಟಿಷ್ ಪ್ರಭುತ್ವಕ್ಕೆ ಪ್ರತಿರೋಧ ತೋರಿದ ಕಾನರ್ಾಡು ಸದಾಶಿವರಾಯರಂಥವರು ಗಾಂಧೀವಾದದ ಹಿನ್ನಲೆಯಲ್ಲಿ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಥಿಸಿಕೊಂಡು ಶ್ರೀಗಂಧದಂತೆ ತೀಡಿಕೊಂಡು ನಾಡಿಗೆ ಸ್ವಾತಂತ್ರ್ಯದ ಸುಗಂಧವನ್ನು ನೀಡಿದರು. ಕಮಲಾದೇವಿ ಚಟ್ಟೋಪಾಧ್ಯಾಯರ ಮೂಲವು ಇಲ್ಲಿನದ್ದೆ. ಕೊಡಗು ಮೂಲದ ಕಲ್ಯಾಣಪ್ಪನ ಚಾರಿತ್ರಿಕ ಹೋರಾಟಕ್ಕೆ ಸಾಕ್ಷಿಯಾದದ್ದು ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆ ಸ್ವಾತಂತ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆ ಅನನ್ಯ. ಇಂತಹ ಮಹಾನ್ ಚೇತನಗಳ ನಿಸ್ವಾರ್ಥ, ತ್ಯಾಗಮಯ ಬಲಿದಾನಗಳನ್ನು ನಾವಿಂದು ಸ್ಮರಿಸಿಕೊಳ್ಳಲೇ ಬೇಕು. ಅವರ ಆದರ್ಶಗಳನ್ನು ಕಣ್ಣ ಮುಂದೆ ಮಾರ್ಗದರ್ಶಿ ಯನ್ನಾಗಿಟ್ಟುಕೊಂಡು ಅವರ ನೆನಪಿನಲ್ಲೇ ನಮ್ಮನ್ನು ನಾವು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಮರ್ಪಿಸಿಕೊಳ್ಳೋಣ.
ನಮ್ಮ ಹಿರಿಯರು ಬಹಳಷ್ಟು ಶ್ರಮವಹಿಸಿ ಗಳಿಸಿ ನಮಗೆ ತಂದಿತ್ತ ಈ ಸ್ವಾತಂತ್ರ್ಯ ದೀಪವನ್ನು ಅಷ್ಟೇ ಜೋಪಾನವಾಗಿ ರಕ್ಷಿಸಿ ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಪ್ರತಿ ಕ್ಷಣವೂ ನೆನಪಿಡಬೇಕು.
ನಾಡಿನ ಬೆನ್ನೆಲುಬಾದ ರೈತರ ನೆರವಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾತ್ರವಲ್ಲ ರೈತರಿಗೆ ನೇರ ಸಹಾಯಧನ ನೀಡಿರುವ ತೃಪ್ತಿ ನಮಗಿದೆ. ಕುಡಿಯವ ನೀರು, ಸುಸ್ಥಿರ ಅಭಿವೃದ್ದಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಬರ ಪರಿಸ್ಥಿತಿ, ನೆರೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ನಮ್ಮ ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳು, ಬಡವರು, ದೀನದಲಿತರು, ಅಶಕ್ತರು ಸಮಾಜದಲ್ಲಿ ತಲೆ ಎತ್ತಿ ಬದುಕಲು ಅವಕಾಶ ಕಲ್ಪಿಸಿದೆ. ಮುಜರಾಯಿ, ಕಾನೂನು ಮತ್ತು ಸುವ್ಯವಸ್ಥೆ, ಕಡಲ್ಕೊರೆತ, ಉದ್ಯೋಗ ತರಬೇತಿ, ಕಾರ್ಮಿಕ ಇಲಾಖೆ, ಕೈಗಾರಿಕೆ, ಸಹಕಾರ, ಮೀನುಗಾರಿಕೆ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ, ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಉತ್ತಮ ಸಾಧನೆ ಮಾಡಿವೆ. ಎಲ್ಲಾ ಇಲಾಖೆಗಳು ತಮ್ಮ ಜನಪರ ಕಾಳಜಿಯನ್ನು ಕರ್ತವ್ಯದಲ್ಲಿ ತೋರಿವೆ.
ಹಲವು ಉತ್ತಮ ಮಾದರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ನೀಡಿದೆ. ನಮಗೆಲ್ಲ ಹೆಮ್ಮ ತಂದಿದೆ.ನಮ್ಮ ಅಧಿಕಾರಾವಧಿಯಲ್ಲಿ, ನಮ್ಮ ಸರಕಾರ ರಾಜ್ಯದ ರೈತರ ರೂ.25,000/- ವರೆಗಿನ ಸಾಲ ಮನ್ನಾ, ಮೀನುಗಾರರಿಗೆ ಮತ್ತು ನೇಕಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೃಷಿ ಉದ್ದೇಶಕ್ಕೆ ಉಚಿತ ವಿದ್ಯುತ್, ಸಣ್ಣ ರೈತರ ಪ್ರತಿ ಕುಟುಂಬಗಳಿಗೆ ಒಣಭೂಮಿ ಅಭಿವೃದ್ಧಿಗೆ ರೂ.1000 ಸಹಾಯಧನ, 10 ಲಕ್ಷ ರೈತ ಕುಟುಂಬಗಳಿಗೆ ಸುವರ್ಣ ಭೂಮಿ ಯೋಜನೆಯಡಿ ಪ್ರೋತ್ಸಾಹ ಧನವಾಗಿ ತಲಾ ಗರಿಷ್ಟ ರೂಪಾಯಿ 10 ಸಾವಿರ, ಹಾಲು ಉತ್ಪಾದಕರಿಗೆ ಲೀಟರ್ ಒಂದರ ರೂಪಾಯಿ 2/- ರಂತೆ ಪ್ರೋತ್ಸಾಹ ಧನ, ಮೀನುಗಾರಿಕೆಗೆ ನೀಡುವ ತೆರಿಗೆ ರಹಿತ ಡಿಸೇಲ್ ಪ್ರಮಾಣ 1 ಲಕ್ಷ ಲೀಟರಿಗೆ ಹೆಚ್ಚಳ, ಮತ್ಸ್ಯಾಶ್ರಯ ಯೋಜನೆಯಡಿ ರೂ.60 ಸಾವಿರ ವೆಚ್ಚದ 2000 ಮನೆಗಳು, ರಾಜ್ಯದಲ್ಲಿ ತಲಾ ರೂ.10 ಲಕ್ಷದಲ್ಲಿ 50 ನೂತನ ಮೀನು ಮಾರುಕಟ್ಟೆ ನಿರ್ಮಾಣ, ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್, ಅಂಗವಿಕಲರಿಗೆ ಮಾಸಿಕ ವೇತನ ಹೆಚ್ಚಳ, ವಾಜಪೇಯಿ ನಗರಾಶ್ರಯ ಯೋಜನೆಯಡಿ ನಿವೇಶನ, ಗ್ರಾಮೀಣ ಮಟ್ಟದಲ್ಲಿ ಬಸವ ವಸತಿ ಯೋಜನೆಯಡಿ ವಸತಿ ಹಂಚಿಕೆ, ರಾಜ್ಯದ ಕರಾವಳಿಯ ಬಂದರುಗಳ ಅಭಿವೃದ್ಧಿಗೆ ``ಕರ್ನಾಟಕ ಮೆರಿಟೈಮ್ ಬೋರ್ಡ್ ಸ್ಥಾಪನೆ ಬೀಡಿ ಮತ್ತು ಟೈಲರ್ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪನೆ, ಜನ ಸಾಮಾನ್ಯರ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾಲಬದ್ಧ ಸೇವೆ ನೀಡುವ `ಸಕಾಲ' ಯೋಜನೆ ಇಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆರೋಗ್ಯ ಕವಚ - ತುತರ್ು ಸೇವೆಗೆ ಅಂಬ್ಯುಲೆನ್ಸ್ ನೆರವು, ಗ್ರಾಮ ಪಂಚಾಯತ್ ವಾರ್ಷಿಕ ಅನುದಾನ ರೂ.6 ಲಕ್ಷ ದಿಂದ ರೂ.8.00 ಲಕ್ಷಕ್ಕೆ ಏರಿಕೆ, ಪ್ರತಿ ತಾಲೂಕು ಪಂಚಾಯತ್ಗೆ ವಾರ್ಷಿಕ ರೂ.1 ಕೋಟಿ ಹೆಚ್ಚುವರಿ ಅನುದಾನ, ಹಾಗೂ ಪ್ರತಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಜಿಲ್ಲೆಯ ಅಭಿವೃದ್ಧಿಗಾಗಿ ರೂ. 2 ಕೋಟಿ ವಿಶೇಷ ಅನುದಾನ, ಪ್ರತೀ ತಾಲೂಕು ಪಂಚಾಯತ್ ಗಳಿಗೆ ವಾರ್ಷಿಕ ತಲಾ ರೂ. 1 ಕೋಟಿ ಅನುದಾನ, ವಿಧಾನ ಸಭಾ ಕ್ಷೇತ್ರದಲ್ಲಿ 20 ಕಿ.ಮೀ. ರಸ್ತೆ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿದ ಕೀರ್ತಿ ನಮ್ಮ ಸರಕಾರದ್ದು. ನಾವು ಇಷ್ಟರಲ್ಲೇ ತೃಪ್ತರಲ್ಲ. ನಿಮ್ಮೆಲ್ಲರ ಸಹಕಾರದಿಂದ ಸರಕಾರದ ಮುಂದಿನ ಉಳಿದ ಅವಧಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ದೇಶದ ನಂಬರ್ 1 ಪಟ್ಟಕ್ಕೆ ಒಯ್ಯುವುದು ನಮ್ಮೆಲ್ಲರ ಹಂಬಲ. ಇದಕ್ಕಾಗಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂಬ ಭರವಸೆಯನ್ನು ಈ ಶುಭಸಂದರ್ಭದಲ್ಲಿ ಜನತೆಗೆ ನೀಡಬಯಸುತ್ತೇನೆ.
ನಮ್ಮೆಲ್ಲರ ಹೆಮ್ಮೆಯ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ನಾಲ್ಕು ಸಾಲು ಹೇಳುವುದಾದರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಕಡಿಮೆ ಅವಧಿಯಲ್ಲಿ ವಿವಿಧ ಯೋಜನೆಗಳ ಮುಖಾಂತರ ಕೋಟ್ಯಂತರ ರೂಪಾಯಿಗಳ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ 22693 ಫಲಾನುಭವಿಗಳು ಮಾಸಿಕ 500 ರೂ. ಪಡೆಯುತ್ತಿದ್ದು, ತಮ್ಮ ಇಳಿ ವಯಸ್ಸಿನಲ್ಲಿ ಇದು ಅವರಿಗೆ ಆಸರೆಯಾಗಿದೆ. ಜಿಲ್ಲೆಯ ಲಕ್ಷಾಂತರ ಜನರಿಗೆ ವಿವಿಧ ಯೋಜನೆಗಳಡಿ ನೇರವಾಗಿ ನೆರವು ಒದಗಿಸುತ್ತಿರುವುದು ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
ನಮ್ಮ ಜಿಲ್ಲೆಗೆ ಉತ್ತಮ ಪ್ರವಾಸೋದ್ಯಮ ಅವಕಾಶವಿದ್ದು, ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಅನುಷ್ಟಾನಕ್ಕೆ ಬರಬೇಕಿದೆ.
_ ಪಿಲಿಕುಳದಲ್ಲಿ 24.5 ಕೋಟಿ ವೆಚ್ಚದಲ್ಲಿ ವಿನೂತನ 3ಡಿ ತಾರಾಲಯ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತಿದೆ.
_ ಪರಿಶಿಷ್ಟ ಜಾತಿಯ ಹಾಗೂ ಪಂಗಡದ ನಿರುದ್ಯೋಗಿಗಳಿಗೆ ಶೇಕಡ 50ರಷ್ಟು ಸಬ್ಸಿಡಿ ದರದಲ್ಲಿ ಇದುವರೆಗೆ ಜಿಲ್ಲೆಯಲ್ಲಿ 62 ಪ್ರವಾಸಿ ವಾಹನ ಸೌಲಭ್ಯ ನೀಡಲಾಗಿದೆ.
_ ಸುಲ್ತಾನ ಬತ್ತೇರಿಯಿಂದ ತಣ್ಣೀರು ಬಾವಿಯವರೆಗೆ 12.00 ಕೋಟಿ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಅನುಮೋದನೆ ಆಗಿದ್ದು ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆಯಲಾಗಿದೆ. .
_ ಕೆರೆಗಳ ಪುನಶ್ಷೇತನಕ್ಕಾಗಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು 5.00 ಕೋಟಿಯಂತೆ ಅನುಮೋದನೆಯಾಗಿದ್ದು 145 ಕೆರೆಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ.
_ ಪುತ್ತೂರು ತಾಲೂಕಿನ ಕೊಯಿಲದಲ್ಲಿ ಪಶು ಸಂಗೋಪನಾ ಕಾಲೇಜು ತೆರೆಯಲು ಸರಕಾರದ ಅನುಮೋದನೆ ದೊರೆತ್ತಿದ್ದು, 2013-14ನೇ ಸಾಲಿನಲ್ಲಿ ಪ್ರಾರಂಭಿಸಲಾಗುವುದು.
_ ಮಂಗಳಾ ಕ್ರೀಡಾಂಗಣದಲ್ಲಿ 400 ಮೀ ಸಿಂಥೆಟಿಕ್ ಟ್ರಾಕ್ ನಿರ್ಮಾಣ ಮಾಡಲು ಸರಕಾರದಿಂದ ರೂ.3.60 ಕೋಟಿ ಅನುದಾನ ಮಂಜೂರಾಗಿದ್ದು, ಸಿವಿಲ್ ಕಾಮಗಾರಿ ಕೆಲಸ ಮುಗಿದಿರುತ್ತದೆ. ಮಳೆ ನಿಂತ ನಂತರ ಸಿಂಥೆಟಿಕ್ ಟ್ರಾಕ್ ಅಳವಡಿಸುವ ಕಾರ್ಯವನ್ನು ಪ್ರಾರಂಭಿಸಲಾಗುವುದು.
_ 15.00 ಕೋಟಿ ವೆಚ್ಚದಲ್ಲಿ ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
_ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನ (1ನೇ ಹಂತ) ಕಾರ್ಯಕ್ರಮದಡಿ 100.00 ಕೋಟಿ ರೂ ಮಂಜೂರಿಯಾಗಿದ್ದು 96.00 ಕೋಟಿ ರೂ ಬಿಡುಗಡೆಯಾಗಿರುತ್ತದೆ. ಒಟ್ಟು 265 ಕಾಮಗಾರಿಗಳಲ್ಲಿ 217 ಕಾಮಗಾರಿಗಳು ಪೂರ್ಣಗೊಂಡಿವೆ. 2ನೇ ಹಂತದಲ್ಲಿ 100.00 ಕೋಟಿ ಮಂಜೂರಾಗಿರುತ್ತದೆ.
_ ಮಾನ್ಯ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ ಒಟ್ಟು 103 ಕಾಮಗಾರಿಗಳ ಪೈಕಿ 88 ಕಾಮಗಾರಿಗಳು ಪೂರ್ಣಗೊಂಡಿವೆ. ಶೇ 95 ಪ್ರಗತಿ ಸಾಧಿಸಲಾಗಿದ್ದು, 22.99 ಕೋಟಿ ವೆಚ್ಚವಾಗಿದೆ. ಉಳಿದ ಕಾಮಗಾರಿಗಳು ಡಿಸೆಂಬರ್ 2012 ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
_ ಮಂಗಳೂರಿನ ಬಂಗ್ರಕೂಳೂರಿನಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣ ಮಾಡಲು ಕ್ರಮ ವಹಿಸಲಾಗುತ್ತಿದೆ.
_ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 50.00ಕೋಟಿ ವೆಚ್ಚದ ಅತಿಥಿ ಗೃಹ ನಿರ್ಮಾಣ ಪೂರ್ಣಗೊಂಡಿರುತ್ತದೆ.
_ ಸುಳ್ಯ ತಾಲೂಕಿನಲ್ಲಿ ರೂ. 2.30 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಕೂಡಲೇ ಕಛೇರಿಯನ್ನು ಸಹ ಪ್ರಾರಂಭಿಸಲಾಗುವುದು.

ಈ ರೀತಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 991.57 ಕೋಟಿ ರೂ.ಗಳನ್ನು ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ಮುಂಬೈಯ ಬಾಬಾ ಆಟೋಮಿಕ್ ರಿಸರ್ಚ ಸೆಂಟರ್ ತಂತ್ರಜ್ಞಾನದ ಬಯೋಗ್ಯಾಸ್ ಸ್ಥಾವರವನ್ನು ಕಮಿಶನಿಂಗ್ ಮಾಡಲಾಗಿದೆ. ನಗರ ನೈರ್ಮಲೀಕರಣ ಯೋಜನೆಯ ಕುರಿತಾಗಿ 14 ಸದಸ್ಯರನ್ನು ಒಳಗೊಂಡ ಸಿಟಿ ಸಾನಿಟೇಶನ್ ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ.
ವಿವಿಧ ಸರಕಾರಿ, ಖಾಸಗಿ ಕಂಪೆನಿಗಳ ಸೇವೆಗಳು ಒಂದೇ ಸೂರಿನಡಿ ಲಭ್ಯವಿರುವ ಮಂಗಳೂರು ಒನ್ ಯೋಜನೆಯನ್ನು ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಟಾನ ಗೊಳಿಸಲಾಗಿದೆ.
ನಮ್ಮ ಸರಕಾರ ಕಳೆದ 4 ವರ್ಷಗಳ ಅವಧಿಯಲ್ಲಿ ನೀಡಿರುವ ಎಲ್ಲಾ ಜನಪರ ಯೋಜನೆಗಳಿಂದ ರಾಜ್ಯದ ಜನಸಾಮಾನ್ಯರು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ.
ನಮ್ಮ ಜಿಲ್ಲೆ ಮತ್ತು ನೆರೆಯ ಉಡುಪಿ ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿದ್ದ ಮೂಲಗೇಣಿ ಪದ್ದತಿಯನ್ನು ರದ್ದುಗೊಳಿಸುವುದಾಗಿ ನಮ್ಮ ಸರ್ಕಾರವು ಜನತೆಯ ಆಶ್ವಾಸನೆಯನ್ನು ನೀಡಿತ್ತು. ಅದರಂತೆ ಕಳೆದ ವರ್ಷ ಇದಕ್ಕಾಗಿ ಕಾಯಿದೆಯನ್ನು ರಚಿಸಿ ವಿಧಾನ ಮಂಡಲದಲ್ಲಿ ಅನುಮೋದನೆ ಪಡೆಯಲಾಗಿತ್ತು. ಈಗ ಈ ಕಾಯಿದೆಯು ಗೆಜೆಟ್ ನೋಟಿಫಿಕೇಶನ್ ಮೂಲಕ ಜಾರಿಗೆ ಬಂದಿದೆ. ಇದರಿಂದಾಗಿ ಸಾವಿರಾರು ಜನ ಮೂಲ ಗೇಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಮೂಲಗೇಣಿದಾರರ ಅನೇಕ ವರ್ಷಗಳ ಸಮಸ್ಯೆಗಳನ್ನು ಪರಿಹಾರ ಮಾಡಿರುವುದು ನಮ್ಮ ಸರ್ಕಾರದ ಇಚ್ಛಾಶಕ್ತಿಗೆ ಉತ್ತಮ ಉದಾಹರಣೆಯಾಗಿದೆ.
ಈ ನಾಲ್ಕು ವರ್ಷಗಳಲ್ಲಿ ಕೊಟ್ಟ ಮಾತಿಗೆ ತಪ್ಪದೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ತೃಪ್ತಿ, ಸಮಾಧಾನ ನಮ್ಮ ಸರಕಾರಕ್ಕೆ ಇದೆ. ಇದೇ ವೇಳೆ ಮಾಡಬೇಕಾದುದು ಇನ್ನೂ ಬೇಕಾದಷ್ಟಿದೆ ಎಂಬ ಅರಿವೂ ನಮಗಿದೆ.
ಸ್ವಾತಂತ್ರ್ಯೋತ್ಸವದ ಈ ವಿಶೇಷ ಸಮಾರಂಭದಲ್ಲಿ ವಿಶಿಷ್ಟ ಸಾಧನೆಗಾಗಿ ಸನ್ಮಾನಿಸಲ್ಪಟ್ಟ ಸಾಧಕರಿಗೆ ನನ್ನ ಅಭಿನಂದನೆಗಳು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಹೋರಾಟಗಾರರನ್ನು ಸ್ಮರಿಸುತ್ತಾ ಭಾರತವು ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
ಸ್ವಾತಂತ್ರ್ಯದ ಅನುಭವ ಮತ್ತು ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಗಬೇಕು. ನಮ್ಮ ಸಂವಿಧಾನದ ಪ್ರಮುಖ ಆಶಯ ಸಮಾನತೆ, ಪ್ರತಿಯೊಬ್ಬರೂ ನೆಮ್ಮದಿಯ ಮತ್ತು ಸಹ ಬಾಳ್ವೆಯ ಜೀವನ ನಡೆಸುವಂತಾಗಬೇಕು. ಅತ್ಯಮೂಲ್ಯವಾದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬೆಳೆಯುವ ಸಂಕಲ್ಪ ತೊಡಲು ಸ್ವಾತಂತ್ರ್ಯೋತ್ಸವ ಆಚರಣೆ ಸರ್ವರಿಗೂ ಸ್ಫೂರ್ತಿ ನೀಡಲಿ ಎಂಬ ಆಶಯದೊಂದಿಗೆ ರಾಜ್ಯದ ಸಮಸ್ತ ಜನತೆಗೆ ಮತ್ತೊಮ್ಮೆ ಶುಭಾಶಯ ಸಲ್ಲಿಸಿ ಮಾತುಗಳನ್ನು ಮುಗಿಸುತ್ತೇನೆ.

ಪಿರಿದೆಲ್ಲ ಮತನೀತಿಗಳಿಗಿಂ ಜೀವಿತವು
ನೆರೆ ಬಂದ ನದಿದಡಕೆ ಬಾಗಿ ಪರಿಯುವುದೆಂ
ಧರ್ಮ ಸೂಕ್ಷ್ಮವ ತಿಳಿವೆ ಲೋಕಸೂತ್ರದ ಸುಳಿವು
ಅರಸು ಜೀವಿತ ಹಿತವ ಮಂಕುತಿಮ್ಮ


ಜೈಹಿಂದ್ - ಜೈ ಕರ್ನಾಟಕ

ಪಥಸಂಚಲನ ಮಾಹಿತಿ:
ಸ್ವಾತಂತ್ರ್ಯೋತ್ಸವದ ಪಥಸಂಚಲನದಲ್ಲಿ 18 ತುಕಡಿಗಳು ಇಂದು ಪಾಲ್ಗೊಂಡಿತ್ತು. ದಂಡನಾಯಕ ಆರ್ ಪಿ ಐ ಶ್ರೀ ಆರ್ . ರಾಘವೇಂದ್ರ ನೇತೃತ್ವ ವಹಿಸಿದ್ದರು.
ಕೆ ಎಸ್ ಆರ್ ಪಿ ತುಕಡಿ ಎಮ್ ನಾಗರಾಜಯ್ಯ ಆರ್ ಎಸ್ ಐ ನೇತೃತ್ವದಲ್ಲಿ, ಸಿ ಎ ಆರ್ ಅಂಡ್ ಡಿ ಎ ಆರ್ ತುಕಡಿ ಎಸ್ ಮೂರ್ತಿ ಆರ್ ಎಸ್ ಯ, ಸಿ ವಿ ಲ್ ತುಕಡಿ ಸುನಿಲ್ ಪಿ ಎಸ್ ಐ, ಟ್ರಾಫಿಕ್ ತುಕಡಿ ಜಿ ಕೆ ಭಟ್ ಪಿ ಎಸ್, ಗೃಹರಕ್ಷಕ ದಳ ತುಕಡಿ ಕೆ ದೇವದಾಸ್ ಶೆಟ್ಟಿ, ಅಗ್ನಿಶಾಮಕ ದಳ ತುಕಡಿ ವಸಂತಕುಮಾರ್ ಹೆಚ್ ಎಮ್, ಆರ್ಮಿ ಎನ್ ಸಿಸಿ ಜ್ಯೂನಿಯರ್ ತುಕಡಿ ನಿರಂಜನ್ ಮೂರ್ತಿ ಸಿ ಎಸ್ ಯು ಒ, ನೇವಿ ಎನ್ ಸಿಸಿ ಸೀನಿಯರ್ ತುಕಡಿ ಶಿಸಿರ್ ಕೋಟ್ಯಾನ್, ಏರ್ ವಿಂಗ್ ಎನ್ ಸಿಸಿ ಜ್ಯೂನಿಯರ್ ತುಕಡಿ ಸಾಯಿಶ್ರೀ, ಆಮರ್ಿ ಎನ್ ಸಿಸಿ ಜ್ಯೂನಿಯರ್ ತುಕಡಿ ಕೆ ವೈಷ್ಣವಿ ಭಟ್, ನೇವಿ ಎನ್ ಸಿಸಿ ಜ್ಯೂನಿಯರ್ ತುಕಡಿ ಸಲ್ಮಾನ್, ಏರ್ ವಿಂಗ್ ಎನ್ ಸಿ ಸಿ ಜ್ಯೂನಿಯರ್ ತುಕಡಿ ಚರನ್ ರಾಜ್, ಆರ್ ಎಸ್ ಪಿ ಬಾಲಕಿಯರ ತುಕಡಿ ಲೇಜಿನ್ ಡಿ ಸೋಜ, ಭಾರತ್ ಸೇವಾದಳ ಬಾಲಕಿಯರ ತುಕಡಿ ಅಫ್ರಿನಾ, ತುಕಡಿ ಸ್ಕೌಟ್ಸ್ ಬಾಲಕರ ತುಕಡಿ ಆಶಯ್ ಕುಮಾರ್, ಆರ್ ಎಸ್ ಪಿ ಬಾಲಕರ ತುಕಡಿ ಸಂತೋಷ್ ಯು ಶೇಟ್, ಭಾರತ್ ಸೇವಾದಳ ಅಭ್ಯಾಸಿ ಪ್ರೌಢಶಾಲೆ ಪ್ರಕಾಶ್, ಗೈಡ್ಸ್ ಸರಕಾರಿ ಸಂಯುಕ್ತ ಪ್ರೌಢಶಾಲೆ ತುಕಡಿ ಕೆ ವಿನಯ್ ಪಾಲ್ಗೊಂಡಿತ್ತು.
ಏರ್ ವಿಂಗ್ ಎನ್ ಸಿ ಸಿ ಜ್ಯೂನಿಯರ್ ತುಕಡಿ ಚರನ್ ರಾಜ್, ಆರ್ ಎಸ್ ಪಿ ಬಾಲಕಿಯರ ತುಕಡಿ ಲೇಜಿನ್ ಡಿ ಸೋಜ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿತು. ನೇವಿ ಎನ್ ಸಿಸಿ ಜ್ಯೂನಿಯರ್ ತುಕಡಿ ಸಲ್ಮಾನ್ ದ್ವಿತೀಯ ಸ್ಥಾನ ಪಡೆಯಿತು.
ಜೊತೆಗೆ ಇಂಡಿಯನ್ ಏರೋ ಮಾಡೆಲಿಂಗ್ ಸೊಸೈಟಿ ಕಾರ್ಕಳದ ರತ್ನಾಕರ್ ನಾಯಕ್ ಅವರಿಂದ ಹೆಲಿಕಾಪ್ಟರ್ ಹಾರಾಟ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ, ಪಶ್ಚಿಮ ವಲಯ ಐಜಿಪಿ ಡಾ. ಪ್ರತಾಪ್ ರೆಡ್ಡಿ,ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಕೆ.ಟಿ. ಶೈಲಜಾ ಭಟ್, ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೋಲಿಸ್ ಅಧೀಕ್ಷಕ ಅಭೀಷೇಕ್ ಗೋಯಲ್, ಜಿ.ಪಂ. ಸಿಇಒ ಡಾ. ಕೆ.ಎನ್. ವಿಜಯ ಪ್ರಕಾಶ್, ತಾಲೂಕ್ ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ ರೈ, ಉಪ ಮೇಯರ್ ಅಮಿತ ಕಲಾ, ಅಲ್ಪ ಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಅಬೂಬಕ್ಕರ್, ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೂಡ ದ ಅಧ್ಯಕ್ಷ ರಮೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.