Monday, August 13, 2012

ಎಂಡೋ ಸಲ್ಫಾನ್ ಪೀಡಿತರಿಗೋಸ್ಕರ ಕ್ಯಾಂಪ್ ಆಯೋಜಿಸಿ: ಸಿ ಟಿ ರವಿ

ಮಂಗಳೂರು, ಆಗಸ್ಟ್. 13:ಎಂಡೋಸಲ್ಪಾನ್ ಪೀಡಿತ ಪ್ರದೇಶಗಳ ಜನರ ಸಮಸ್ಯೆ ಪರಿಹರಿಸಲು ಹಾಗೂ ಅವರಿಗೆ ಅಂಗವಿಕಲ ಮಾಶಾಸನ ಲಭಿಸುವಂತೆ ಕ್ರಮಕೈಗೊಳ್ಳಲು ಕಂದಾಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಸೂಕ್ತ ಜಾಗದಲ್ಲಿ ಕ್ಯಾಂಪ್ ಆಯೋಜಿಸಿ ಸ್ಥಳದಲ್ಲಿಯೇ ಸರ್ಟಿಫಿಕೇಟ್ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಸಿಟಿ ರವಿಯವರು ಸೂಚಿಸಿದರು.
ಅವರು ಇಂದು ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು ಪಂಚಾಯತ್ನಲ್ಲಿ ನಡೆಸಿದ ಬೆಳ್ತಂಗಡಿ ತಾಲೂಕು ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆಗಳನ್ನು ಆಲಿಸಿ ಉತ್ತರಿಸುತ್ತಿದ್ದರು. ಕಂದಾಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಈ ಕ್ಯಾಂಪನ್ನು ಆಯೋಜಿಸಬೇಕೆಂದು, ಇದಕ್ಕೆ ಸ್ಥಳೀಯರು ಸ್ಪಂದಿಸಬೇಕೆಂದು, ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಹೇಳಿದರು.
ಶಾಲಾ ಮಕ್ಕಳ ಹಿತದೃಷ್ಠಿಯನ್ನು ಗಮನದಲ್ಲಿರಿಸಿ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಮಾಡಬೇಕು. ಮಕ್ಕಳ ಶಿಕ್ಷಣವೇ ಇಲಾಖೆಯ ಆದ್ಯತೆಯಾಗಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸಿಟಿ ರವಿಯವರು ತಿಳಿಸಿದರು. ಜಿಲ್ಲೆಯಲ್ಲಿ ಮುಂಗಾರು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮಳೆ ಹಾನಿ ಕಾರ್ಯಗಳಿಗೆಲ್ಲ ಸಕಾಲದಲ್ಲಿ ತುರ್ತಾಗಿ ಸ್ಪಂದಿಸಬೇಕೆಂದು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಜನರ ಸಮಸ್ಯೆಯನ್ನು ಪರಿಹರಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿಯೊಂದು ತಾಲೂಕಿನಲ್ಲೂ ವೈಯಕ್ತಿಕ ಹಾಗೂ ಸಾಮಾಜಿಕ ಸೊತ್ತುಗಳನ್ನು ನಿರ್ಮಿಸುವ ಸುವಣರ್ಾವಕಾಶವಿದ್ದು, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ಮಾಡಿದ ಸಚಿವರು, ಜನಪ್ರತಿನಿಧಿಗಳ ಸಮಸ್ಯೆಗಳನ್ನು ಆಲಿಸಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಕಪ್ಸ್, ಪ್ಲಾಸ್ಟಿಕ್ ಡೈನಿಂಗ್ ಕವರ್ ಗಳನ್ನು ನಿದ್ಯಾಕ್ಷಿಣ್ಯವಾಗಿ ನಿಷೇಧಿಸಲು ಸೂಚನೆ ನೀಡಿದರು. ಯಾವುದೇ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದ ಅವರು. ಆಹಾರ ಮತ್ತು ಪಡಿತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿದರು. ಉಸ್ತುವಾರಿ ಸಚಿವರು ತಾಲೂಕಿನಲ್ಲಾಗಿರುವ ಗೋಮಾಳ ಒತ್ತುವರಿ ತೆರವು ಮಾಡಲು ಸೂಚಿಸಿದರು. ನೆಮ್ಮದಿ ಕೇಂದ್ರದಲ್ಲಾಗುತ್ತಿರುವ ತೊಂದರೆ ಸಂಬಂಧ ಜನಪ್ರತಿನಿಧಿಗಳು ಸಚಿವರ ಗಮನ ಸೆಳೆದಾಗ, ಜಿಲ್ಲಾಧಿಕಾರಿಗಳು ಮಾತನಾಡಿ ಸೆಪ್ಟೆಂಬರ್ ಒಂದರಿಂದ ಜಿಲ್ಲಾಡಳಿತವೇ ಉಸ್ತುವಾರಿ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಮಕ್ಕಳ ಅಪೌಷ್ಠಿಕತೆ ಬಗ್ಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದ ಸಚಿವರು ತಾಲೂಕಿನಲ್ಲಿ ಎಲ್ಲಾ ಬಿಪಿಎಲ್ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸೂಚಿಸಿದರು. ಧರ್ಮಸ್ಥಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಆಗಸ್ಟ್ 23 ರೊಳಗೆ ಜಾಗ ಗುರುತಿಸಲು ತಹಶೀಲ್ದಾರರಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಕೆ.ವಸಂತ ಬಂಗೇರ, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಾಲ ಭವನ ಸೊಸೈಟಿ ಅಧ್ಯಕ್ಷ್ಯೆ ಶ್ರೀಮತಿ ಸುಲೋಚನಾ ಭಟ್, ಜಿಲ್ಲಾಧಿಕಾರಿ ಡಾ. ಚೆನ್ನಪ್ಪ ಗೌಡ, ಸಿಇಒ ಡಾ. ಕೆ.ಎನ್.ವಿಜಯಪ್ರಕಾಶ್,ತಾಲೂಕು ಪಂಚಯತ್ ಅಧ್ಯಕ್ಷ್ಯೆ ಮಮತಾ ಶೆಟ್ಟಿ, ಉಪಾಧ್ಯಕ್ಷ್ಯ ಶ್ರೀ ಸಂತೋಷ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್, ಉಪಾಧ್ಯಕ್ಷ್ಯೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ನಾಗರಾಜ್, ಎಪಿಎಂಸಿ ಅಧ್ಯಕ್ಷರಾದ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಂಡ ಕಾಮಗಾರಿಗಳು
2011-12ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ಆರ್ಟಿಇ ಪೂರಕ ಯೋಜನೆಯಡಿ ಕೆಲವು ನಿರ್ಧಿಷ್ಟ ವರ್ಗಗಳಿಗೆ ಸೇರಿದ ಮಕ್ಕಳಿಗಾಗಿ ಶಿಕ್ಷಣ ವಂಚಿತ ನಗರ ಪ್ರದೇಶದ ಮಕ್ಕಳು,ಬೆಟ್ಟ ಗುಡ್ಡಗಾಡು ನದಿ ಅರಣ್ಯ ಪ್ರದೇಶದ ನಕ್ಸಲ್ ಪೀಡಿತ ಪ್ರದೇಶ ಇತರೇ ಭೌಗೋಳಿಕ ಅಡೆತಡೆಗಳು ಇತ್ಯಾದಿ ವಿಚಾರಣೆಗಳಿಗಾಗಿ ದಕ್ಷಿಣಕನ್ನಡ ಜಿಲ್ಲೆಗೆ ಒಂದು ಸನಿವಾಸ ಶಾಲೆ ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ.ಶಾಲೆಯಲ್ಲಿ ಒಟ್ಟು 100 ಮಕ್ಕಳಿಗೆ ಪ್ರವೇಶಾ ವಕಾಶವಿದ್ದು, ಹೆಣ್ಣು ಮತ್ತು ಗಂಡು ಮಕ್ಕಳಿಗೆ 6ನೇ ತರಗತಿ ಯಿಂದ ಶಿಕ್ಷಣ ನೀಡಲಾಗುತ್ತಿದೆ.ರೂ.32.05 ಲಕ್ಷ ಆವರ್ತಕ ವೆಚ್ಚ, ಶಾಲಾ ಕಟ್ಟಡ ಮತ್ತು ಹಾಸ್ಟೆಲ್ ವ್ಯವಸ್ಥೆ ಕಟ್ಟಡ ನಿರ್ಮಾಣಕ್ಕೆ ರೂ.154.53 ಲಕ್ಷ ಮಂಜೂರು ಮಾಡಲಾಗಿದೆ.

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ ಎಂಬ ಯೋಜನೆ ಉದ್ದೇಶದಡಿ ಅತ್ಯುತ್ತಮ ಸಮಗ್ರ ಸಾಮಥ್ರ್ಯ ಸೌಧವನ್ನು ರೂ.20.83 ಲಕ್ಷ ರೂ.ವೆಚ್ಚವಾಗಿದೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮಪಂಚಾಯಿತಿ ಪಡಂಗಡಿ ಗ್ರಾಮದ ಪೆರ್ಣಮಂಜದಿಂದ ಕಾರ್ಯಣ-ಬಳೆಂಜ ರಸ್ತೆ ಒಟ್ಟು 5.20 ಕಿ.ಮೀ ಉದ್ದವಿದ್ದು, ಈ ರಸ್ತೆಯ ಅಭಿವೃದ್ಧಿಗೆ 25 ಲಕ್ಷ ರೂ. ಮಂಜೂರಾಗಿದೆ. ಕಣಿಯೂರು ಗ್ರಾಮಪಂಚಾಯಿತಿನ ಉರುವಾಲು ಗ್ರಾಮದ ಕೊರಂಜದಿಂದ ಸರಳಿ ಮುರ ರಸ್ತೆ ಒಟ್ಟು 6 ಕಿ.ಮೀ ಉದ್ದವಿದ್ದು, 25 ಲಕ್ಷ ರೂ. ಸಮಗ್ರ ಕಾಮಗಾರಿಗೆ ಬಿಡುಗಡೆಯಾಗಿದೆ.