Saturday, August 4, 2012

ಭತ್ತದ ಬೆಳೆ ವಿಮೆಗೆ ಅಂತಿಮ ದಿನಾಂಕ ವಿಸ್ತರಣೆ

ಮಂಗಳೂರು, ಆಗಸ್ಟ್.04 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು 12-13ನೇ ಸಾಲಿನಲ್ಲಿಯೂ ಮುಂದುವರಿಸಲಾಗಿದ್ದು, ಮುಂಗಾರು ಹಂಗಾಮಿಗೆ ಭತ್ತದ ಬೆಳಗೆ ಕೃಷಿ ವಿಮೆ ಮಾಡಿಸಲು ಸಾಲ ಪಡೆಯದ ರೈತರಿಗೆ ಜುಲೈ 31 ಅಂತಿಮ ದಿನಾಂಕವಾಗಿತ್ತು. ಆದರೆ ಇದನ್ನು 14.8.12 ರವರೆಗೆ ಮುಂದುವರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯ ಲಾಭವನ್ನು ರೈತರು ಪಡೆದುಕೊಳ್ಳಬೇಕೆಂದು ಕೋರಿರುವ ಇವರು, ಮಂಗಳೂರು ತಾಲೂಕಿನ ಎ ಹೋಬಳಿಯನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ಇತರ ಹೋಬಳಿಗಳು ಯೋಜನೆಯ ವ್ಯಾಪ್ರಿಗೆ ಒಳಪಟ್ಟಿವೆ. ಮಳೆಯಾಶ್ರಿತ ಭತ್ತ ಬೆಳೆಯುವ ಎಲ್ಲಾ ರೈತರು ಹೆಕ್ಟೇರಿಗೆ 367.50 ಪ್ರೀಮಿಯಂ ನ್ನು ಪಾವತಿಸಿ ಪ್ರಾರಂಭಿಕ ಇಳುವರಿ ಮೊತ್ತಕ್ಕೆ ಯೋಜನೆಯ ವ್ಯಾಪ್ತಿಗೆ ಒಳಪಡಬಹುದಾಗಿರುತ್ತದೆ.
ಬೆಳೆ ಸಾಲ ಪಡೆದ ರೈತರ ಬೆಳೆ ವಿಮೆ ಮೊತ್ತ ಕನಿಷ್ಠ ಬೆಳೆ ಸಾಲದ ಮೊತ್ತಕ್ಕೆ ಸರಿಸಮವಾಗಿರುತ್ತದೆ. ಬೆಳೆ ಸಾಲ ಪಡೆಯುವ ರೈತರು 1.4.12ರಿಂದ 30.9.12ರ ಒಳಗಾಗಿ ಕಡ್ಡಾಯವಾಗಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರು ನೀಡಬೇಕಾದ ವಿಮಾ ಕಂತಿಗೆ ಶೇ. 10ರಷ್ಟು ರಿಯಾಯಿತಿ ಇರುತ್ತದೆ.
ಹೋಬಳಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಹೋಬಳಿವಾರು ಬೆಳೆ ಕಟಾವು ಪ್ರಯೋಗಗಳ ಮೂಲಕ ಬೆಳೆಯ ವಾಸ್ತವಿಕ ಇಳುವರಿಯನ್ನು ಲೆಕ್ಕಾಚಾರ ಮಾಡಿ, ಪ್ರಾರಂಭಿಕ ಇಳುವರಿಯ ಶೇ 60ಕ್ಕಿಂತ ಕಡಿಮೆ ವಾಸ್ತವಿಕ ಇಳುವರಿ ಬಂದಿದ್ದಲ್ಲಿ ಹೋಬಳಿಯ ಇಡೀ ಪ್ರದೇಶದಲ್ಲಿ ಬೆಳೆಗೆ ವಿಮೆ ಮಾಡಿಸಿರುವ ಎಲ್ಲ ರೈತರು ಇಳುವರಿಯಲ್ಲಿ ಕಡಿತ ಅನುಭವಿಸಿರುವರೆಂದು ಭಾವಿಸಿ, ಸೂಕ್ತವಾಗಿ ವಿಮಾ ಪರಿಹಾರವನ್ನು ನೀಡಲಾಗುವುದು.
ವಿಮೆ ಮಾಡಿಸಿದವರಿಗೆ ಮುಂಗಾರು ಹಂಗಾಮಿನಲ್ಲಿ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಪ್ರವಾಹ,ಆಲಿಕಲ್ಲು ಮಳೆ, ಭೂಕಂಪ ಮತ್ತು ಚಂಡಮಾರುತದಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟದ ಪರಿಹಾರವನ್ನು ನೀಡಲಾಗುವುದು. ಈ ರೀತಿ ಬೆಳೆ ನಷ್ಟ ಸಂಭವಿಸಿದರೆ ವಿಮೆ ಮಾಡಿಸಿದ ರೈತರು 48 ಗಂಟೆಯೊಳಗಾಗಿ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪೆನಿ ಆಫ್ ಇಂಡಿಯಾ ಬೆಂಗಳೂರು (ದೂ. ಸಂ. 080 25322860) ಈ ಕಚೇರಿಗಳಿಗೆ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಮತ್ತು ಹಾನಿಗೆ ಕಾರಣಗಳನ್ನು ತಕ್ಷಣ ಸಲ್ಲಿಸಬೇಕು.
ಈ ಸಂಬಂಧ ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ)ಗಳನ್ನು, ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ / ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.