Friday, August 31, 2012

ಜಿಲ್ಲೆಯ ಅತ್ಯುತ್ತಮ 19 ಎಸ್ ಡಿ ಎಂಸಿಗಳಿಗೆ ಅಭಿನಂದನೆ

ಮಂಗಳೂರು, ಆಗಸ್ಟ್. 31 :ಮಾತೃ ಭಾಷೆಯಲ್ಲಿ ಗುಣಾತ್ಮಕ ಶಿಕ್ಷಣ ಮಕ್ಕಳಿಗೆ ಲಭ್ಯವಾಗಿಸಲು ಸಂಘಟಿತ ಯತ್ನ ಹಾಗೂ ಸಮುದಾಯದ ಸಹಕಾರ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಅವರು ಹೇಳಿದರು.
ಅವರಿಂದು ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯೆಟ್) ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಡಯೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಎಸ್ ಡಿಎಂಸಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರ ಪ್ರತಿಯೊಂದು ಮಗುವು ಶಿಕ್ಷಣದಿಂದ ವಂಚಿತವಾಗದಂತೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಶಿಕ್ಷಕರ ಮತ್ತು ಪೋಷಕರ ಸಹಕಾರ ಅತ್ಯಗತ್ಯ ಎಂದ ಅಧ್ಯಕ್ಷರು, ಸರ್ಕಾರದ ಸೌಲಭ್ಯಗಳು ಸದುಪಯೋಗವಾಗ ಬೇಕಾದರೆ ಮಕ್ಕಳು ಬೆಳೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಮತ್ತು ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಶ್ಲಾಘಿಸುವ ಕೆಲಸಗಳಾಗಬೇಕು. ಬೆನ್ನುತಟ್ಟಿ ಪ್ರೋತ್ಸಾಹಿಸುವುದರಿಂದ ಉತ್ತಮ ಕೆಲಸಗಳಾಗಲು ಸಾಧ್ಯ. ಅಂತಹ ಕೆಲಸವನ್ನು ಇಂದು ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಆವರಣಗೋಡೆ ನಿರ್ಮಾಣಕ್ಕೆ ಜಿ.ಪಂ.ವತಿಯಿಂದ ರೂ.1.5ಲಕ್ಷ ಅನುದಾನ ಒದಗಿಸುತ್ತಿದ್ದು ಹೆಚ್ಚುವರಿ ಹಣದ ಅಗತ್ಯವಿದ್ದಲ್ಲಿ ಸ್ಥಳೀಯ ಪಂಚಾಯತ್ ಸಹಕಾರದಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಲಹೆ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಯತ್ತಲೂ ಆಕರ್ಷಿತರಾಗಬೇಕೆಂಬ ನಿಟ್ಟಿನಲ್ಲಿ `ಕೃಷಿ ದರ್ಶನ' ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಸೆಪ್ಟೆಂಬರ್ ತಿಂಗಳಿನಿಂದ ದ.ಕ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ ಎಂದು ಹೇಳಿದ್ದಾರೆ.
ಮಕ್ಕಳು ಕೃಷಿ ಚಟುವಟಿಕೆಯತ್ತ ಆಕರ್ಷಿತರಾಗಬೇಕೆಂಬುದು `ಕೃಷಿ ದರ್ಶನ'ದ ಮುಖ್ಯ ಉದ್ದೇಶ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಶಿಕ್ಷಕರು, ಎಸ್ಡಿಎಂಸಿಯವರು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಾಲೆಯ ಬೆಳವಣಿಗೆಯಲ್ಲಿ ಎಸ್ಡಿಎಂಸಿಗಳ ಪಾತ್ರ ಮಹತ್ತರವಾದುದು ಎಂದರು.
ಇದೇ ಸಂದರ್ಭ ಉತ್ತಮ ಸಾಧನೆ ತೋರಿದ ಜಿಲ್ಲೆಯ 19 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಸಮಿತಿಯನ್ನು ತಲಾ ರೂ.3 ಸಾವಿರ ನಗದಿನೊಂದಿಗೆ ಪ್ರಶಸ್ತಿ ಪತ್ರವಿತ್ತು ಗೌರವಿಸಲಾಯಿತು.
ಡಿಡಿಪಿಐ ಮೋಸೆಸ್ ಜಯಶೇಖರ್, ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಸಹ ನಿರ್ದೇಶಕ ಆನಂದ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ಭಟ್ ಅತಿಥಿಗಳಾಗಿದ್ದರು.
ಡಯೆಟ್ ಪ್ರಾಚಾರ್ಯ ಪಾಲಾಕ್ಷಪ್ಪ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ನಗರ ಕ್ಷೇತ್ರ ಶಿಕ್ಷಣಾಧಿಕಾರಿ ದಯಾವತಿ ಸ್ವಾಗತಿಸಿದರು.

ಅಭಿನಂದಿಸಲ್ಪಟ್ಟ 19 ಎಸ್ ಡಿ ಎಂಸಿಗಳು:
ಬಂಟ್ವಾಳ ತಾಲೂಕಿನ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ದೇವಶ್ಯ ಪಡೂರು, ದ.ಕ.ಜಿ.ಪಂ . ಸ.ಹಿ.ಪ್ರಾ.ಶಾಲೆ ಪಡಿಬಾಗಿಲು ವಿಟ್ಲ, ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಇರಾ, ಬೆಳ್ತಂಗಡಿ ತಾಲೂಕಿನ ಸ.ಹಿ.ಪ್ರಾ.ಶಾಲೆ ಕರಂಬಾರು, ಸ.ಹಿ.ಪ್ರಾ.ಶಾಲೆ ಓಡಿಲ್ನಾಳ ಮತ್ತು ಕಂಚಿನಡ್ಕ ಸ.ಕಿ.ಪ್ರಾ.ಶಾಲೆ. ಮಂಗಳೂರು ನಗರದ ಸ.ಹಿ.ಪ್ರಾ.ಶಾಲೆ ಗಾಂಧಿನಗರ, ಸ.ಮಾ. ಉ. ಹಿ.ಪ್ರಾ.ಶಾಲೆ ಮರಕಡ, ಸ.ಹಿ.ಪ್ರಾ.ಶಾಲೆ ಬೆಂಗ್ರೆ ಕಸಬ, ಸ.ಹಿ.ಪ್ರಾ.ಶಾಲೆ ಅದ್ಯಪಾಡಿ, ಸ.ಹಿ.ಪ್ರಾ.ಶಾಲೆ ಪಡುಪಣಂಬೂರು, ಸ.ಹಿ.ಪ್ರಾ.ಶಾಲೆ ಬಡಗ ಎಕ್ಕಾರು, ಮೂಡಬಿದ್ರೆಯ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಕೋಡಂಗಲ್ಲು, ಕೋಟೆ ಬಾಗಿಲು, ಪುತ್ತೂರು ತಾಲೂಕಿನ ಸ.ಹಿ.ಪ್ರಾ.ಶಾಲೆ ಪೆರ್ಲಂಪಾಡಿ ಶಾಲೆ, ಸ.ಹಿ.ಪ್ರಾ.ಶಾಲೆ ಶಾಂತಿನಗರ, ಸ.ಉ.ಹಿ.ಪ್ರಾ.ಶಾಲೆ ಕುದ್ಮಾರು, ಸುಳ್ಯ ತಾಲೂಕಿನ ಜಯನಗರ ಸರಕಾರಿ ಶಾಲೆ ಮತ್ತು ಮಡಪ್ಪಾಡಿ ಸ.ಹಿ.ಪ್ರಾ.ಶಾಲೆ.