Monday, August 13, 2012

ಬೆಳ್ತಂಗಡಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್: ಸಿ ಟಿ ರವಿ

ಮಂಗಳೂರು,ಆಗಸ್ಟ್.13 : ಅಭಿವೃದ್ಧಿ ಹೊಂದುತ್ತಿರುವ ತಾಲೂಕುಗಳಲ್ಲಿ ಬೆಳ್ತಂಗಡಿ ತಾಲೂಕು ಮುಂಚೂಣಿಯಲ್ಲಿದ್ದರೂ, ಕೆಲವು ಕಾರಣಗಳಿಂದ ಸಮಸ್ಯೆಗಳನ್ನೂ ಎದುರಿಸುತ್ತಿವೆ. ಬೆಳ್ತಂಗಡಿ ವ್ಯಾಪ್ತಿಯಲ್ಲಿರುವ ದೂರ ದುರ್ಗಮ ಪ್ರದೇಶಾಭಿವೃದ್ಧಿಗೆ ವಿಶೇಷ ಪ್ಯಾಕೇಜಿನಡಿ ಹಣ ಬಿಡುಗಡೆ ಮಾಡಲಾಗಿದ್ದು, ಜನರ ಸಮಸ್ಯೆಗೆ ಸ್ಪಂದಿಸುವ ಎಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ ಟಿ ರವಿ ಅವರು ಹೇಳಿದರು.
ಈ ನಿಟ್ಟಿನಲ್ಲಿ ಇಂದು ಬೆಳ್ತಂಗಡಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ಮಾಡಿ ಮಾತನಾಡಿದ ಅವರು, ಸರ್ಕಾರದ ಬಹುಮುಖ್ಯ ಯೋಜನೆಗಳಲ್ಲೊಂದಾದ ಭಾಗ್ಯಲಕ್ಷ್ಮಿ ಯೋಜನೆಯಡಿ ತಾಲೂಕಿನ 14 ಮಕ್ಕಳಿಗೆ ಭಾಗ್ಯ ಲಕ್ಷ್ಮಿ ಬಾಂಡ್ ವಿತರಿಸಿದರು. ಇದಲ್ಲದೆ ಸಾಂಕೇತಿಕವಾಗಿ ಇಂದು 6,000 ಮನೆಗಳನ್ನು ವಿವಿಧ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಚಿವರು ವಿತರಿಸಿದರು.
ಇಲ್ಲಿನ ಗ್ರಾಮ ಅರಣ್ಯ ಸಮಿತಿಗಳಾದ ಕಡಿರುದ್ಯಾವರ ಗ್ರಾಮ ಅರಣ್ಯ ಸಮಿತಿಗೆ 1,24,401 ರೂ., ಮತ್ತು ಮಾಲಾಡಿಯ ಸೋಣಂದೂರಿನ ಸಮಿತಿಗೆ 1,75,734 ರೂ. ಚೆಕ್ ನ್ನು ಸಚಿವರು ನೀಡಿದರು. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಬೆಳ್ತಂಗಡಿಯ ನೆರಿಯಾ ಮತ್ತು ಲಾಯಿಲಾಕ್ಕೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಸಚಿವರು, ಸರ್ಕಾರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬದುಕುವ ಹಕ್ಕು ಒದಗಿಸುವಲ್ಲಿ ಹಲವು ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಬೆಳ್ತಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಮೂರುಕೋಟಿ 90 ಲಕ್ಷ ರೂ. ಮಂಜೂರಾಗಿದ್ದು, ರಾಜ್ಯದ ರೈತರ ಹಿತಕಾಪಾಡಲು ಮೂರುವರೆ ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದರು.
ಗ್ರಾಮೀಣ ರಸ್ತೆ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಒಟ್ಟಾಗಿ ಕರ್ತವ್ಯನಿರ್ವಹಿಸಬೇಕು. ಸಾರ್ವಜನಿಕರು ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ ವಸಂತ ಬಂಗೇರ ಅವರು, ತಾಲೂಕಿನಲ್ಲಿ ಈಗಾಗಲೇ 2 ವಸತಿ
ಶಾಲೆಗಳಿದ್ದು, ಸರ್ವಶಿಕ್ಷಣ ಅಭಿಯಾನದಡಿ ಮೂರನೇ ವಸತಿ ಶಾಲೆ ಬೆಳ್ತಂಗಡಿಗೆ ಮಂಜೂರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರಲ್ಲದೆ, ತಾಲೂಕಿನಲ್ಲಿ ಪೂಂಜಾಲಕಟ್ಟೆ ಪಿ ಯು ಕಾಲೇಜು, ಮಾಲಾಡಿ ಐಟಿಐ ಕಾಲೇಜು, ಕೊಕ್ಕಡ ಇಂಜಿನಿಯರಿಂಗ್ ಕಾಲೇಜಿನ ಕಾಮಗಾರಿಯನ್ನು ಆದ್ಯತೆ ನೆಲೆಯಲ್ಲಿ ಆರಂಭಿಸಲು ಉಸ್ತುವಾರಿ ಸಚಿವರ ಗಮನಸೆಳೆದರು. ಬಿಪಿಎಲ್ ವರ್ಗದವರಿಗೆ ಪಡಿತರ ಚೀಟಿ ವಿತರಿಸುವಲ್ಲಿ ಅನ್ಯಾಯವಾಗಿದ್ದು ಅರ್ಹರಿಗೆ ಪಡಿತರ ಚೀಟಿ ತಲುಪುವಂತಾಗಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್,ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ತಾಲೂಕು ಪಂಚಾಯತ್ ಅಧ್ಯಕ್ಷ್ಯೆ ಮಮತಾ ಶೆಟ್ಟಿ ಸ್ವಾಗತಿಸಿದರು, ಇಒ ಡಾ ನಾಗರಾಜ್ ವಂದಿಸಿದರು. ಉಪಾಧ್ಯಕ್ಷ್ಯ ಸಂತೋಷ್, ಉಪಾದ್ಯಕ್ಷ್ಯೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಎಪಿಎಂಸಿ ಅಧ್ಯಕ್ಷರಾದ ಕುಶಾಲಪ್ಪ ಗೌಡ, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.