Saturday, August 25, 2012

ಸುಸ್ಥಿರ ನಗರ ಯೋಜನೆ ಮತ್ತು ಸೌಂದರೀಕರಣ ಮೂಡಾದ ಆದ್ಯತೆಯಾಗಬೇಕು: ಸಿ ಟಿ ರವಿ

ಮಂಗಳೂರು ಆಗಸ್ಟ್ 25 : ನಗರಾಭಿವೃದ್ಧಿ ಪ್ರಾಧಿಕಾರ ನಗರದ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಸಮಗ್ರ ಅಭಿವೃದ್ಧಿಯಾಗುವಾಗ ಆಮ್ಲಜನಕ ವಲಯ (ಆಕ್ಸಿಜನ್ ಝೋನ್) ಗಳನ್ನು ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಹೇಳಿದರು.ಅವರಿಂದು ಮಂಗಳೂರು ನಗರಾಭಿವೃದ್ಧಿ ಕಚೇರಿಯಲ್ಲಿ ಆಯೋಜಿಸಿದ್ದ ಮೂಡಾದ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಂಗಳೂರು ನಗರ ವಿಪರೀತವೆನಿಸುವ ರೀತಿಯಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಮೇಲೇಳುತ್ತಿರುವ ಅಪಾರ್ಟ್ ಮೆಂಟ್ ಗಳನ್ನು ನೋಡಿದರೆ ಧಾರಣಾ ಸಾಮಥ್ರ್ಯ ಹಾಗೂ ರಸ್ತೆ, ನೀರು ಗಳಿಲ್ಲದ ಸಂದಿಗಳಲ್ಲಿ 30 ಅಂತಸ್ತಿನ ಮಳಿಗೆಗಳು ನಿರ್ಮಾಣವಾಗುತ್ತಿರುವುದು ಆರೋಗ್ಯಕರವಲ್ಲ ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಲೇಔಟ್ ಗಳಲ್ಲೂ ಕಡ್ಡಾಯವಾಗಿ ಪಾರ್ಕ್ ಗಳಿರಬೇಕಿದ್ದು ಪಾಕ್ರ್ ಅಭಿವೃದ್ಧಿಗೆ ಮೂಡಾ ಆದ್ಯತೆ ನೀಡಬೇಕು. ಈ ಸಂಬಂಧ ಮುಂದಿನ ಹತ್ತು ದಿನಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ ತನ್ನ ಮುಂದಿನ ಭೇಟಿಯ ವೇಳೆ ವರದಿ ಸಿದ್ಧಪಡಿಸಬೇಕೆಂದು ಸೂಚಿಸಿದರು.
ಮಂಗಳೂರಿಗೊಂದು ಲಾಲ್ ಬಾಗ್, ಕಬ್ಬನ್ ಪಾರ್ಕ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು. ಇಂತಹ ಉತ್ತಮ ಮಾದರಿಗಳನ್ನು ತಾನು ಮಂಗಳೂರಿನಿಂದ ಅಪೇಕ್ಷಿಸುತ್ತೇನೆ ಎಂದೂ ಅವರು ನುಡಿದರು.
ಎಲ್ಲ ಯೋಜನೆಗಳನ್ನು ಸಮಯಮಿತಿಯೊಳಗೆ ನಡೆಸಬೇಕೆಂದು ಸೂಚಿಸಿದ ಅವರು, ನಗರದ ಹಂಪನಕಟ್ಟೆಯಲ್ಲಿರುವ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ಯೋಜನೆ ಅನುಷ್ಠಾನದ ಕುರಿತು ಪ್ರಶ್ನಿಸಿದರು. ಮೂಡಾದ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ಮಾತನಾಡಿ, ನಗರದ ಸೌಂದರ್ಯಕ್ಕೆ ಮೆರುಗು ನೀಡುವ ಪಾರ್ಕಗಳು, ಹೊಸ ಲೇಔಟ್ ಗಳನ್ನು ಆರಂಭಿಸಲು ಚಾಲನೆ ನೀಡಲಾಗಿದ್ದು, ಹತ್ತು ದಿನಗಳೊಳಗೆ ಹಂಪನಕಟ್ಟಾ ಕಾರ್ ಪಾರ್ಕಿಂಗ್ ಗೆ ಇರುವ ಅಡೆತಡೆಗಳನ್ನು ನಿವಾರಿಸಲಾಗುವುದು ಎಂದರು. ಡಿಸೆಂಬರ್ ನಲ್ಲಿ ಇಲ್ಲಿ ಕಾಮಗಾರಿಗೆ ಚಾಲನೆ ನೀಡುವ ಭರವಸೆಯನ್ನು ಸಚಿವರಿಗೆ ನೀಡಿದರು.
ಉಪಸಭಾಪತಿ ಎನ್ ಯೋಗೀಶ್ ಭಟ್ ಅವರು ಮಾತನಾಡಿ, ಕದ್ರಿ ಪಾರ್ಕಿನಲ್ಲೇ ಲಾಲ್ ಬಾಗ್ ನಂತಹ ಗಾಜಿನಮನೆ, ತೋಟಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದರು. ಈ ಸಂಬಂಧ ಹಾಗೂ ಮಂಗಳಾ ಕಾರ್ನಿಷ್ ಯೋಜನೆ ಸಂಬಂಧ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶೀಘ್ರ ಸಭೆ ಕರೆಯುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮಾದರಿ ಪ್ರಸ್ತಾವನೆಗಳು ಇಲ್ಲಿಂದ ಸಲ್ಲಿಕೆಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಬಾಕಿ ಇರುವ ಎಲ್ಲ ಕಡತಗಳನ್ನು ಸಭೆಗೆ ತನ್ನಿ ಎಂದು ಸಚಿವರು ಹೇಳಿದರು.
ಅಭಿವೃದ್ಧಿಗೆಂದು ಜನರಿಂದ ಪಡೆದ ತೆರಿಗೆ ಹಣವನ್ನು ಅದಕ್ಕೆಂದೇ ಮೀಸಲಿಡಿ ಎಂದ ಸಚಿವರು, ಈಗಿರುವ ಉದ್ಯಾನವನಗಳು ಮತ್ತು ಮುಂದೆ ಅಭಿವೃದ್ಧಿ ಪಡಿಸಲಿರುವ ಉದ್ಯಾನವನಗಳ ಬಗ್ಗೆ ಮುಂದಿನ ಸಭೆಯಲ್ಲಿ ತಮಗೆ ಸಮಗ್ರ ಮಾಹಿತಿ ಇರಬೇಕೆಂದರು.
ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಮೂಡಾ ಕಮಿಷನರ್ ಅಜಿತ್ ಕುಮಾರ್ ಹೆಗಡೆ, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಮೂಡಾ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.