Saturday, August 25, 2012

ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮುಖ್ಯಮಂತ್ರಿಯವರಿಂದ ಶಿಲಾನ್ಯಾಸ

ಮಂಗಳೂರು, ಆಗಸ್ಟ್.25 : ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮನಪಾ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳೂರು ನಗರದ ಉರ್ವ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಭವನ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಸರಕಾರ 4 ಕೋಟಿ ರೂ. ಮಂಜೂರು ಮಾಡಿದ್ದು, 2 ಕೋಟಿ ರೂ.ಬಿಡುಗಡೆಗೊಳಿಸಿದೆ. ಭವನ ನಿರ್ಮಾಣಕ್ಕೆ ಮನಪಾದಿಂದ 40 ಲಕ್ಷ ರೂ. ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪಾಲಿಕೆಯಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದರು. ನಗರಾಭಿವೃದ್ದಿ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್,ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ. ಕೃಷ್ಣ ಪಾಲೇಮಾರ್, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ. ಗಣೇಶ್ ಕಾರ್ಣಿಕ್, ಯು.ಟಿ. ಖಾದರ್,ಮೇಯರ್ ಗುಲ್ಝಾರ್ ಭಾನು, ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಮೂಡದ ಅಧ್ಯಕ್ಷ ರಮೇಶ್, ಉಪ ಮೇಯರ್ ಅಮಿತಕಲಾ, ಆಯುಕ್ತ ಡಾ. ಹರೀಶ್ ಕುಮಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ಕದ್ರಿ ಉದ್ಯಾನವನದಲ್ಲಿನ ಸಂಗೀತ ಕಾರಂಜಿಗೆ ಗಿಡ ನೆಡುವ ಮೂಲಕ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ವಿಧಾನ ಸಭಾ ಉಪ ಸಭಾಪತಿ ಎನ್.ಯೋಗಿಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಶಾಸಕ ಕೃಷ್ಣ ಜೆ. ಪಾಲೇಮಾರ್,ಅಭಯ ಚಂದ್ರ ಜೈನ್,ಯು.ಟಿ.ಖಾದರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.