Friday, August 17, 2012

ಕೇಬಲ್ ಟಿವಿ ನೆಟ್ ವರ್ಕ ಸಂಸ್ಥೆಗಳಿಗೆ ದಾಖಲೆ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ: ಜಿಲ್ಲಾಧಿಕಾರಿ

ಮಂಗಳೂರು, ಆಗಸ್ಟ್.17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೇಬಲ್ ಟಿ ವಿ ನೆಟ್ ವರ್ಕ್ ಸಂಸ್ಥೆಗಳು ಇದೇ ಆಗಸ್ಟ್ 31 ರೊಳಗೆ ತಮ್ಮ ಕಾರ್ಯಾಚರಣೆ ಸಂಬಂಧ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ಎನ್. ಎಸ್. ಚನ್ನಪ್ಪಗೌಡ ಅವರು ಸೂಚಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಕೇಬಲ್ ಟೆಲಿವಿಷನ್ ನೆಟ್ ವರ್ಕ ಅಧಿನಿಯಮ 1995 ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳ ಜಾರಿಯನ್ನು ಮೇಲ್ವಿಚಾರಣೆ ಮಾಡಲು ಸಂಘಟಿಸಿದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯಲ್ಲಿ ಈ ಸೂಚನೆ ನೀಡಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಕೇಬಲ್ ಆಪರೇಟರ್ ಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಮತ್ತು ಸ್ಥಳೀಯ ಮಟ್ಟದಲ್ಲಿ ಕೇಬಲ್ ಆಪರೇಟರ್ ಗಳು ಅನಪೇಕ್ಷಿತ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕಾರಣ ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕೇಬಲ್ ಆಪರೇಟರ್ ಗಳ ಪಾತ್ರವನ್ನು ವಿವೇಚಿಸುವ ಸಮಿತಿಯನ್ನು ರಚಿಸಿ ಕೇಬಲ್ ಟೆಲಿವಿಷನ್ ನೆಟ್ ವರ್ಕ ಅಧಿನಿಯಮ 1995 ರ ಉಪಬಂಧಗಳನ್ನು ಜಾರಿಗೊಳಿಸುವ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತಂದಿರುತ್ತದೆ.
ಇದರಂತೆ ಇಂದು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಸಭೆ ನಡೆದಿದ್ದು, 1.9.2012ರಿಂದ ಈ ಸಂಬಂಧ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ದೂರು ಕೋಶ ತೆರೆದು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ತಾಲೂಕು ಮಟ್ಟದಲ್ಲ್ಲೂ ದೂರು ಸ್ವೀಕರಿಸಲು ವ್ಯವಸ್ಥೆ ರೂಪಿಸಲು ಸಭೆ ನಿರ್ಧರಿಸಿತು.
ಎಲ್ಲಾ ಕೇಬಲ್ ಆಪರೇಟರ್ ಗಳು ಇನ್ನು ಮುಂದೆ ತಾವು ಪ್ರಸಾರ ಪಡಿಸುವ ಎಲ್ಲ ಕಾರ್ಯಕ್ರಮಗಳ ವಿವರಗಳನ್ನು ದಾಖಲಿಸಿ, ಜಿಲ್ಲಾಧಿಕಾರಿಗಳು ಕೇಳಿದ ತಕ್ಷಣ ದಾಖಲೆ ಸಹಿತ ಹಾಜರುಪಡಿಸಲು ಬದ್ಧರಾಗಿರಬೇಕು.
ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷ ರಾಗಿರುವರು. ನಗರ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಸದಸ್ಯ ರಾಗಿರುವರು. ಜಿಲ್ಲಾಧಿ ಕಾರಿಯಿಂದ ನೇಮಕಗೊಂಡ ಜಿಲ್ಲೆಯ ಮಹಿಳಾ ಕಾಲೇಜಿನ ಪ್ರಾಂಶುಪಾಲರು, ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ, ಶಿಕ್ಷಣ ತಜ್ಞರು, ಮನ:ಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಸದಸ್ಯರಾಗಿರುವರು. ಜಿಲ್ಲೆಯ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುವರು.
ಸಮಿತಿಯ ಪ್ರಕಾರ್ಯಗಳು: ಕೇಬಲ್ ಟೆಲಿವಿಷನ್ ಮೂಲಕ ಪ್ರಸಾರವಾಗುವ ವಿಷಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರು ನೀಡಿದರೆ ಸಮಿತಿ ಕ್ರಮಕೈಗೊಳ್ಳಲಿದೆ. ಯಾವುದೇ ಕಾರ್ಯಕ್ರಮ ಸಾರ್ವಜನಿಕ ವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಅಥವಾ ಯಾವುದೇ ಸಮುದಾಯಕ್ಕೆ ವ್ಯಾಪಕ ಅತೃಪ್ತಿ ಅಥವಾ ನೋವು ಉಂಟು ಮಾಡಿದರೆ ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ಕೂಡಲೇ ತರುವುದು. ಅನಧಿಕೃತ ಅಥವಾ ನಕಲಿ ಚಾನೆಲ್ ಗಳು ಕಾರ್ಯನಿರ್ವಹಿಸಿದಂತೆ ಕೇಬಲ್ ನೆಟ್ ವಕ್ರ್ ನಲ್ಲಿ ಫ್ರೀ ಟು ಏರ್ ಚಾನೆಲ್ ಗಳು ಮತ್ತು ಅಜ್ಞಾಪಕ ಪ್ರಸಾರಕ್ಕೆ ಅಧಿಸೂಚಿಸಲಾದ ಚಾನೆಲ್ ಗಳು ಲಭ್ಯತೆ ಬಗ್ಗೆ ಮೇಲ್ವಿಚಾರಣೆ ಮಾಡುವುದು. ಕಾನೂನು ಉಲ್ಲಂಘಿಸಿದರೆ ಅಧಿನಿಯಮ 11 ರ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬಹುದು.
ಅಧಿನಿಯಮದಡಿ ಪೊಲೀಸು ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಹಾಯಕ ಆಯುಕ್ತರು ಕಾನೂನು ಕ್ರಮಕೈಗೊಳ್ಳಲು ಅಧಿಕೃತ ಅಧಿಕಾರಿಗಳೆಂದು ಅಧಿಸೂಚಿಸಿದೆ.
ಇಂದಿನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಎ. ದಯಾನಂದ, ಶಿಕ್ಷಣ ತಜ್ಞ ಪ್ರೊ. ಎ ಎಂ ನರಹರಿ, ಬಲ್ಮಠ ಸರ್ಕಾರಿ ಹೆಮ್ಮಕ್ಕಳ ಮಹಾವಿದ್ಯಾಲಯದ ಪ್ರಾಂಶುಪಾಲರು ಶ್ರೀಮತಿ ತಾರ ರಾವ್, ವಿಶ್ವ ವಿದ್ಯಾನಿಲಯ ಕಾಲೇಜಿನ ಸಮಾಜ ಶಾಸ್ತ್ರಜ್ಞೆ ಶ್ರೀಮತಿ ಮಹೇಂದ್ರಮಣಿ ರಾವ್, ವಾಮಂಜೂರು ಧರ್ಮಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಸಿಸ್ಟರ್ ಡ್ಯಾಫ್ನಿ ಸಭೆಯಲ್ಲಿ ಉಪಸ್ಥಿತರಿದ್ದರು.