Friday, September 11, 2009

ಕೆಡಿಪಿ ಸಭೆಗೆ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಲು ಸೂಚನೆ

ಮಂಗಳೂರು,ಸೆ.11:ಜಿಲ್ಲೆಯ ಅಭಿವೃದ್ಧಿಗೆ ಮತ್ತು ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಲು ಅಧಿಕಾರಿಗಳ ಸಹಕಾರ ಮುಖ್ಯ;ಜಿಲ್ಲೆಯ ಪ್ರಗತಿ ಪರಿಶೀಲನೆಗಾಗಿ ಮೀಸಲಿರುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಗೆ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಹಾಜರಿದ್ದು, ಸಭೆಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಕಾಮಗಾರಿ ಅಭಿವೃದ್ಧಿ, ಸಾಧನೆಯ ಬಗ್ಗೆ ಮಾಹಿತಿ ನೀಡುವ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಾದರೆ ಅಥವಾ ಮಾಹಿತಿ ಇಲ್ಲದೆ ಆಗಮಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು
ಹೇಳಿದರು.
ಭಾಗ್ಯಜ್ಯೋತಿ,ಕುಟೀರ ಜ್ಯೋತಿ ಯೋಜನೆಗಳ ಪ್ರಗತಿಯ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಹಾಗೂ ಮೆಸ್ಕಾಂನಿಂದ ಮಾಹಿತಿಯನ್ನು ಪಡೆದುಕೊಂಡ ಅವರು, ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ದೊರಕುವಂತಾಗಲು ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಇಂದಿರಾ ಆವಾಸ್ ಯೋಜನೆಯಡಿ ನಿಗದಿತ ಗುರಿ ತಲುಪದ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಅವರು ಅಸಮಾಧಾನ ವ್ಯಕ್ತಪಡಿಸಿ ನಿಗದಿತ ಗುರಿ ಸಾಧಿಸುವಂತೆ ಸೂಚಿಸಿದರಲ್ಲದೆ, ಈ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ಆಗಿರುವ ಲೋಪವೇ ಪ್ರಮುಖ ಸಮಸ್ಯೆಯಾಗಿದ್ದು, ಈ ಸಮಸ್ಯೆಯನ್ನು ಸರಿಪಡಿಸಿಕೊಂಡರ ಯೋಜನೆ ಯಶಸ್ವಿ ಅನುಷ್ಠಾನ ಸಾಧ್ಯ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಲು ಹೇಳಿದ್ದು, ಈ ತಿಂಗಳಲ್ಲಿ ಕಾಮಗಾರಿಗಳು ಆರಂಭಗೊಳ್ಳಬೇಕು ಎಂದು ಆದೇಶಿಸಿದರು.
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮೆಸ್ಕಾಂ ಜೊತೆ ಚರ್ಚಿಸಿ ಆದ್ಯತೆಯ ಮೇಲೆ ಫಲಾನುಭವಿಗಳ ಮನೆಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಸಿ ಇ ಒ ಹೇಳಿದರು.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳೊಡನೆ ಚರ್ಚಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮವಹಿಸಬೇಕು ಎಂದ ಅವರು, ಅತ್ಯುತ್ತಮ ಯೋಜನೆ ಇದಾಗಿದ್ದು,ಜಲಾನಯನ ಇಲಾಖೆ ಮತ್ತು ಇಂಜಿನಿಯರಿಂಗ್ ವಿಭಾಗ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸಮಾಡಬೇಕೆಂದರು.
ಸಭೆಯಲ್ಲಿ ಅಂಗನವಾಡಿಗಳಲ್ಲಿ 3ರಿಂದ 6 ವರ್ಷದ ಮಕ್ಕಳ ಹಾಜರಾತಿ ಕಡಿಮೆಯಾಗಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿ, 336 ಖಾಸಗಿ ಬಾಲವಾಡಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಬಗ್ಗೆ ವಿದ್ಯಾಂಗ ಇಲಾಖೆ ಮಾಹಿತಿ ನೀಡಬೇಕು ಎಂದರು. ವಿದ್ಯಾಂಗ ಇಲಾಖೆ ಉಪನಿರ್ದೇಶಕ ಚಾಮೇಗೌಡ ಅವರು ಬಾಲವಾಡಿ ಇರುವ ಶಾಲೆಗಳು ನೋಂದಣಿಯನ್ನು ಮಾಡಿಕೊಂಡಿವೆ ಎಂದರು. ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ನಿರ್ಣಯ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಇದಲ್ಲದೆ ಈ ತಿಂಗಳಲ್ಲಿ ಪೌಷ್ಠಿಕ ಆಹಾರ ಬೇಡಿಕೆ ಪೂರಕವಾಗಿ ಬಂದಿಲ್ಲ ಎಂಬ ವಿಚಾರದ ಬಗ್ಗೆಯ ಸಭೆಯಲ್ಲಿ ಚರ್ಚಿಸಲಾಯಿತು.
ಸ್ವಚ್ಛತಾ ಆಂದೋಲನದಡಿ ಜಿಲ್ಲೆಯು ಮುಂಚೂಣಿಯಲ್ಲಿದ್ದು, 23 ಗ್ರಾಮಪಂಚಾಯಿತಿಗಳು ಪ್ರಸಕ್ತ ಸಾಲಿನಲ್ಲಿ ರಾಜ್ಯ ತಂಡದ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದು, 15ನೇ ತಾರೀಖಿನ ನಂತರ ಕೇಂದ್ರ ತಂಡದ ಪರಿಶೀಲನೆ ನಡೆಯಲಿದೆ. ಈ ಕಾರ್ಯಕ್ರಮ ನಿರಂತರವಾಗಿದ್ದು,ಈ ಯೋಜನೆಯ ಯಶಸ್ಸಿಗೆ ಕಾರಣರಾದವರನ್ನು ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರು ಅಭಿನಂದಿಸಿದರು. ಸಭೆಯಲ್ಲಿ ಉಪಕಾರ್ಯದರ್ಶಿ ಮಹಮ್ಮದ್ ನಝೀರ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸದಾನಂದ ಮಲ್ಲಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶ್ರೀ ಹೆಗಡೆ, ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್ ಉಪಸ್ಥಿತರಿದ್ದರು.