Wednesday, September 16, 2009

ಸ್ಮಾರ್ಟ್ ಕಾರ್ಡ್ ನಿಂದ ಅಪರಾಧ ತನಿಖೆಗೆ ಸಹಕಾರ: ಐಜಿಪಿ ಹೊಸೂರ್

ಮಂಗಳೂರು,ಸೆ.16:ಅಪರಾಧ ಘಟನೆಗಳಲ್ಲಿ ವಾಹನಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,ಅಪರಾಧಕ್ಕೆ ಬಳಕೆಯಾಗುವ ವಾಹನಗಳ ಪರವಾನಿಗೆ ರದ್ಧತಿ ಮತ್ತು ಮುಟ್ಟುಗೋಲು ಹಾಕಿಕೊಳ್ಳುವಂತೆ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್ ಅವರು ಹೇಳಿದರು.
ಇಂದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರಂಭಿಸಲಾದ ಸ್ಮಾರ್ಟ್ ಕಾರ್ಡ್ ಸಾರ್ವಜನಿಕರಿಗೆ ನೀಡುವ ಮೂಲಕ ಗಣಕೀಕೃತ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು,ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಿದರೆ ಸಮಾಜಘಾತುಕ ಶಕ್ತಿಗಳ ಪತ್ತೆ ಮತ್ತು ತಡೆ ಸಾಧ್ಯ ಎಂದರು.ಮಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ಸಂಚಾರಿ ನಿಯಮಗಳನ್ನು ಸುಸೂತ್ರವಾಗಿ ಅನುಷ್ಠಾನಕ್ಕೆ ತರಲು ಆಧುನಿಕ ತಂತ್ರಜ್ಞಾನಗಳು ನೆರವಾಗಲಿದೆ. ಸ್ಥಳೀಯ ಸಾರಿಗೆ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದ್ದು,ಸಾರ್ವಜನಿಕರಿಂದ ದೂರುಗಳು ಬಾರದಂತೆ ಸಾರಿಗೆ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ನಡೆದುಕೊಳ್ಳಬೇಕೆಂದೂ ಈ ಸಂದರ್ಭದಲ್ಲಿ ಅವರು ಸಲಹೆ ಮಾಡಿದರು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಜಂಟಿ ಸಾರಿಗೆ ಆಯುಕ್ತರಾದ ವಿಜಯ ವಿಕ್ರಂ ಅವರು ಸ್ಮಾರ್ಟ್ ಕಾರ್ಡ್ ಹೊಂದುವವರಿಗೆ ಒಂದು ವರ್ಷಗಳ ಅವಧಿಯಲ್ಲಿ ದೊರೆಯುವ ಸೌಲಭ್ಯಗಳು ಮತ್ತು ವಿಮಾ ಸೌಕರ್ಯಗಳ ಬಗ್ಗೆ ವಿವರಿಸಿದರಲ್ಲದೆ, ಈಗಾಗಲೇ ಬೆಂಗಳೂರು, ಗುಲ್ಬರ್ಗ, ಬೆಳಗಾಂ,ಧಾರವಾಡ, ಶಿವಮೊಗ್ಗ,ಮೈಸೂರುಗಳಲ್ಲಿ ಈ ಸೇವೆ ಜಾರಿಯಲ್ಲಿದ್ದು, ಇಂದಿನಿಂದ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆರಂಭಗೊಂಡಿದೆ. ಜಿಲ್ಲೆಯಲ್ಲಿ 2.71 ಲಕ್ಷ ವಾಹನಗಳಿದ್ದು,ಮುಂದಿನ ಎರಡು ವರ್ಷದೊಳಗೆ ಇವರೆಲ್ಲರೂ ತಮ್ಮ ಚಾಲನಾ ಅನುಜ್ಞಾ ಪತ್ರ ಮತ್ತು ನೋಂದಣೀ ಪುಸ್ತಕಗಳನ್ನು ಸ್ಮಾರ್ಟ್ ಕಾರ್ಡ್ ರೂಪಕ್ಕೆ ಪರಿವರ್ತಿಸಲು ಅವಕಾಶವಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್,ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್. ಎನ್. ರಮೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಆರ್ ಟಿ ಒ ಪುರುಷೋತ್ತಮ ಜೆ ಸ್ವಾಗತಿಸಿದರು. ಉಪ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ವಂದಿಸಿದರು.