Tuesday, September 8, 2009

ಗ್ರಾಮಾಭಿವೃದ್ಧಿ ಆಂದೋಲನದಡಿ ಮುಂದುವರಿಕಾ ಶಿಕ್ಷಣಕ್ಕೆ ಕಾಯಕಲ್ಪ

ಮಂಗಳೂರು,ಸೆ.8:ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನದಡಿ ಮಂಗಳೂರು ತಾಲೂಕನ್ನು ಮಾದರಿಯಾಗಿಸಿ 49 ಗ್ರಾಮಪಂಚಾಯಿತಿಗಳಲ್ಲಿ ಮುಂದುವರಿಕಾ ಶಿಕ್ಷಣ ಕೇಂದ್ರಗಳನ್ನು ಇನ್ನಷ್ಟು ಸಬಲವಾಗಿ ರೂಪುಗೊಳಿಸುವ ನಿರ್ಣಯ ವಿಶ್ವ ಸಾಕ್ಷರತಾ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಲಾದ ಸಾಕ್ಷರತಾ ದಿನಾಚರಣೆಯಲ್ಲಿ ಕೈಗೊಳ್ಳಲಾಯಿತು.
ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾಕ್ಷರತೆ, ಸಶಕ್ತತೆ, ಸ್ವಚ್ಛತೆ, ಸೌಹಾರ್ದತೆಯ ಸಂದೇಶ ಸಾರುವ ಸಂವಾದ ರೂಪಿ ಕಾರ್ಯ ಕ್ರಮವನ್ನು ಸಾಕ್ಷರತಾ ಸ್ವಯಂ ಸೇವಕರ ವೇದಿಕೆ, ನವಸಾಕ್ಷರರ ಸಂಘ,ಜನ ಶಿಕ್ಷಣ ಟ್ರಸ್ಟ್ ಮತ್ತು ತಾಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಾಕ್ಷರತೆ ಮತ್ತು ಸ್ವಚ್ಛತೆಯ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ದುಡಿಯುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.ಸಮಾರಂಭದಲ್ಲಿ ಭಾಗವಹಿಸಿದ ಶಾಸಕ ಯು ಟಿ ಖಾದರ್ ಅವರು, ಸಮಾಜದ ಏಳಿಗೆಗೆ ಸ್ವಾರ್ಥರಹಿತವಾಗಿ ದುಡಿಯುವ ಸಂಘಟನೆಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದರಲ್ಲದೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸುವ ಆಶ್ವಾಸನೆಯನ್ನು ಇತ್ತರು. ಸ್ವಚ್ಚತೆ,ಸಾಕ್ಷರತೆಯಲ್ಲಿ ಸಿಕ್ಕಿಂ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯವನ್ನು ನಂಬರ್ ವನ್ ಆಗಿ ರೂಪಿಸಲು ಇಂತಹ ಆಂದೋಲನಗಳಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಗಟ್ಟಿ ಸಮಾರಂಭದಲ್ಲಿ ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಮಾತನಾಡಿದರು. ಧರಣೇಂದ್ರ ಕುಮಾರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಸ್ವಚ್ಛತಾಂದೋಲನವನ್ನು ಅನುಷ್ಠಾನಕ್ಕೆ ತಂದ ಬಗ್ಗೆ, ಜನಪ್ರತಿನಿಧಿಗಳಿಗೆ ಜನರ ಕೆಲಸ ಮಾಡಲು ಅಗತ್ಯವಾದ ಇಚ್ಚಾಶಕ್ತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೊಲೀಸ್ ಅಧಿಕಾರಿ ಬಿ.ಜೆ. ಭಂಡಾರಿ ಅವರು ಸಾಮಾಜಿಕ ಸಮಾನತೆ ಮತ್ತು ಶಿಕ್ಷಣದ ಮಹತ್ವವನ್ನು ವಿವರಿಸಿದರಲ್ಲದೆ ವ್ಯಾಜ್ಯ ಮುಕ್ತ ಗ್ರಾಮ ಎಂಬ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಿದರು.ತಮ್ಮ 60ನೇ ವಯಸ್ಸಿನಲ್ಲಿ ಅಕ್ಷರ ಕಲಿತ ಹಿರಿಯ ನವಸಾಕ್ಷರ ಚೀಂಕ್ರ ಪೂಜಾರಿಯಿಂದ ಇತ್ತೀಚೆಗೆ ನವಸಾಕ್ಷರರಾಗಿ ಜನಪ್ರತಿನಿಧಿಗಳಾಗುವಷ್ಟು ಎತ್ತರಕ್ಕೆ ಏರಿದ ಮಹಿಳೆಯರು ತಮ್ಮ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.ನವಸಾಕ್ಷರರ ಯಶೋಗಾಥೆ,ಸಂವಾದಗಳ ಬಳಿಕ 203 ಗ್ರಾಮ ಪಂಚಾಯಿತಿಗಳಲ್ಲೂ ಸ್ಥಳೀಯ ಜನರ ಮತ್ತು ಆಡಳಿತದ ಸಹಕಾರದಿಂದ ಮುಂದುವರಿಕ ಶಿಕ್ಷಣ ಕೇಂದ್ರಗಳು ಆರಂಭಿಸಲು ವಿಫಲವಾದರೆ ಮುಂದಿನ ವರ್ಷ ಕಾಟಾಚಾರದ ಸಾಕ್ಷರತಾ ದಿನಾಚರಣೆ ಅಗತ್ಯವಿಲ್ಲ ಎಂದು ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನ ಶೆಟ್ಟರು ಹೇಳಿದರು. ಶಿಕ್ಷಣದಂತಹ ಉತ್ತಮ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕುಂಪಲ ಅವರು ಹೇಳಿದರು.ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಯಾಳ ಜಿ ಹೆಗಡೆ ಇದಕ್ಕೆ ದನಿಗೂಡಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಅವರು ಈ ಸಂಬಂಧ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.