Thursday, September 17, 2009

ಸಾಮಾಜಿಕ ಸಮಾನತೆಗೆ ಉದ್ಯೋಗಖಾತ್ರಿ ಯೋಜನೆ

ಮಂಗಳೂರು,ಸೆ.17:ಉದ್ಯೋಗಖಾತ್ರಿ ಯೋಜನೆ ಜನರಿಗೋಸ್ಕರ ರೂಪಿಸಿರುವ ಕಾಯಿದೆಯಾಗಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಬಂಟ್ವಾಳ ಕ್ಷೇತ್ರ ಶಾಸಕರಾದ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದ ಸುರಿಬೈಲಿನ ದ.ಕ.ಜಿ.ಪಂ ಹಿ.ಪ್ರಾ. ಶಾಲೆಯಲ್ಲಿ ವಾರ್ತಾ ಇಲಾಖೆ ಸ್ಥಳೀಯಾಡಳಿತದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ 'ಸ್ವಾವಲಂಬನೆಗಾಗಿ ಉದ್ಯೋಗಖಾತ್ರಿ'ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಾಮರಸ್ಯ ಮತ್ತು ಸಹಕಾರದಿಂದ ಅಭಿವೃದ್ಧಿ ಸಾಧ್ಯ ಎಂದ ಅವರು, ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ, ಅಧಿಕಾರಿಗಳ ಕರ್ತವ್ಯಪ್ರಜ್ಞೆ ಮತ್ತು ಫಲಾನುಭವಿಗಳ ಪಾಲ್ಗೊಳ್ಳುವಿಕೆಯಿಂದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.ನರೇಗಾ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು,ದುಡಿಯುವ ಕೈಗಳಿಗೆ ಉದ್ಯೋಗ ನೀಡಲಿದೆ ಎಂದರು.ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಎಂ.ಬಾಬು,ಜಿ.ಪಂ.ಸದಸ್ಯರಾದ ಮಮತ ಗಟ್ಟಿ ಸೇರಿದಂತೆ ಸ್ಥಳೀಯಾಡಳಿತದ ಸದಸ್ಯರು, ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಕೊಲ್ನಾಡು ಗ್ರಾ.ಪಂ. ಅಧ್ಯಕ್ಷರಾದ ಜಯಂತಿ ಎಸ್. ಪೂಜಾರ್ ಸಮಾರಂಭದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಇ ಒ ವಸಂತರಾಜ್ ಶೆಟ್ಟಿ, ತೋಟಗಾರಿಕೆ ಅಧಿಕಾರಿ ಸಂಜೀವ ನಾಯ್ಕ ಅವರು ಮಾಹಿತಿ ನೀಡಿ,ಜನರ ಪ್ರಶ್ನೆಗಳಿಗೆ ಉತ್ತರಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಯೋಜನೆಯ ಬಗ್ಗೆ ಗಿರೀಶ್ ನಾವಡ ತಂಡದಿಂದ ನಾಟಕ ಪ್ರದರ್ಶನ ಮತ್ತು ವಸ್ತುಪ್ರದರ್ಶನವಿತ್ತು.
ಸುರಿಬೈಲು ಶಾಲೆಯ ಮಕ್ಕಳು ಪ್ರಾರ್ಥಿಸಿದರು ಮತ್ತು ಆಶಯಗೀತೆ ಹಾಡಿದರು.ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತನ್ನಾಡಿದರು.ಗ್ರಾ.ಪಂ.ಕಾರ್ಯದರ್ಶಿ ಪೂವಪ್ಪ ಬಂಗೇರ ವಂದಿಸಿದರು.ಶಾಲೆಯ ಶಿಕ್ಷಕರು ಮತ್ತು ಎಸ್ ಡಿ ಎಂಸಿ ಅಧ್ಯಕ್ಷ ಅಬೂಬಕ್ಕರ್ ಕಾರ್ಯಕ್ರಮ ಆಯೋಜಿಸಲು ಸಂಪೂರ್ಣ ಸಹಕಾರ ನೀಡಿದರು.