Monday, September 14, 2009

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್ ಭಂಡಾರಿ

ಮಂಗಳೂರು,ಸೆ.14:ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 19ನೇ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಶಿಕ್ಷಣ ಇಲಾಖೆಯ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಗೈರು ಹಾಜರಾಗುವ ಬಗ್ಗೆ, ಶಾಲೆಗಳಲ್ಲಿ ಶಿಕ್ಷಕರು ಇಲ್ಲದಿರುವ ಬಗ್ಗೆ ಮತ್ತು ಶಾಲಾ ಕಟ್ಟಡಗಳ ದುರವಸ್ಥೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ವಿದ್ಯಾಂಗ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣದ ಬಗ್ಗೆ ಮತ್ತು ಶಾಲೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಅವರು ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸದಸ್ಯರು ಶಾಸಕರು ಹಾಗೂ ಸಚಿವರೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ತಂತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದ ಅವರು,ತಮ್ಮ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಸದ್ವಿನಿಯೋಗ ಮಾಡಿ ಎಂದು ಸಲಹೆ ಮಾಡಿದರು.ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಆರೋಪಗಳ ವಿಚಾರಣೆಗಳನ್ನು ನಿಗದಿತ ಸಮಯಮಿತಿಯೊಳಗೆ ಮುಗಿಸುವಂತೆಯೂ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಸಾವಯವ ಕೃಷಿಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತಂತೆ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಕೃಷಿಇಲಾಖೆ ಜಂಟಿ ನಿರ್ದೇಶಕರು, 13 ಜನ ಅಧಿಕಾರೇತೆರ ಸದಸ್ಯರು ಹಾಗೂ 9ಜನ ಅಧಿಕಾರಿಗಳು ಸಾವಯವ ಕೃಷಿ ಮಿಷನ್ ಯೋಜನೆಯಡಿ ಫಲಾನುಭವಿಗಳನ್ನು ಸರ್ಕಾರದ ಮಾರ್ಗದರ್ಶನದಂತೆ ಆಯ್ಕೆ ಮಾಡಿರುತ್ತಾರೆ ಎಂದರು. ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರಲ್ಲಿ 7 ಕೃಷಿಕರನ್ನು ಆಯ್ಕೆ ಮಾಡಲಾಗಿದ್ದು, ಮಂಗಳೂರು, ಬಂಟ್ವಾಳ, ಬೆಳ್ತಂಗಡಿ,ಪುತ್ತೂರು, ಸುಳ್ಯ ತಾಲೂಕುಗಳಿಗೆ ತಲಾ 24.5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದರು.ಪ್ರತಿ ತಾಲೂಕಿನ 300 ರೈತರಿಗೆ ಸೌಲಭ್ಯ ನೀಡು ವ ಯೋಜನೆಯಿದೆ ಎಂದು ಹೇಳಿದರು
ಮಂಗಳೂರಿನ ಉಳ್ಳಾಲ ಪ್ರದೇಶ,ಹಾಗೂ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ 9 ಗ್ರಾಮ ಪಂಚಾಯತಿಗಳ 12 ಗ್ರಾಮಗಳಿಗೆ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಸರ್ಫೇಸ್ ವಾಟರ್ ಸಿಸ್ಟಮ್ ಅಡಿಯಲ್ಲಿ ನೀರು ಸರಬರಾಜು ಪ್ರಸ್ತಾವನೆಯನ್ನು 22 ಕೋಟಿ ರೂ.ಗಳಿಗೆ ತಯಾರಿಸಲಾಗಿದ್ದು, ಪ್ರಾಯೋಗಿಕವಾಗಿ ಮಂಗಳೂರು ತಾಲೂಕಿನ ಮುನ್ನೂರು ಮತ್ತು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದ್ದು ಇಲ್ಲಿನ ಯಶಸ್ಸಿನ ಬಳಿಕ ಜಲಮರುಪೂರಣ ವ್ಯವಸ್ಥೆಯನ್ನು ಉಳಿದೆಡೆಗಳಲ್ಲಿ ಅನುಷ್ಟಾನಕ್ಕೆ ತರುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯವನಿರ್ವಹಣಾಧಿಕಾರಿ ಪಿ. ಶಿವಶಂಕರ್ ಹೇಳಿದರು.
ಪಡಿತರ ಚೀಟಿ ವಿತರಣೆ, ಎಚ್ 1 ಎನ್ 1 ಬಗ್ಗೆ, ತೋಟಗಾರಿಕಾ ಇಲಾಖೆಯಲ್ಲಿ ಇಂಗುಗುಂಡಿ ನಿರ್ಮಾಣ ಮಾಡುವ ಬಗ್ಗೆ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಜಿ.ಪಂ.ನಲ್ಲಿ ನಿರ್ಣಯ ತೆಗೆದುಕೊಂಡು ಯೋಜನೆಯನ್ನು ಆದ್ಯತೆಯ ಮೇಲೆ ಜಿಲ್ಲೆಗೆ ಪಡೆದುಕೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.ಸಭೆಯಲ್ಲಿ ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾದ ಜಗನ್ನಾಥ್ ಸಾಲಿಯಾನ್,ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಸದಾನಂದ ಮಲ್ಲಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ರಾಜಶ್ರೀ ಹೆಗಡೆ ಉಪಸ್ಥಿತರಿದ್ದರು.