ಇಂದು ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಸರಾ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಸ್ಥ ಹಾಗೂ ಸಾಮಾಜಿಕ ಸಹಬಾಳ್ವೆಗೆ ಕ್ರೀಡೆ ಪ್ರಯೋಜನಕಾರಿಯಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ತರಬೇತಿಯನ್ನು ನೀಡುವುದರಿಂದ ಈ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆಯ್ಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ನಾಡ ಹಬ್ಬ ದಸರಾದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದರಿಂದ ಉತ್ತಮ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ ಎಂದರು.ರಾಷ್ಟ್ರ ಮಟ್ಟದ ಕಬ್ಬಡ್ಡಿ ಕ್ರೀಡಾಪಟು ಬಿನ್ಸಿ ಜೋಸೆಫ್ ಕ್ರೀಡಾಳುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಭಂಡಾರಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಳುಗಳಿಗೆ ಸಂದೇಶ ನೀಡಿದರು. ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಸಿ. ರಮೇಶ್ ಸ್ವಾಗತಿಸಿದರು. ಇಲಾಖೆಯ ದೇವರಾಜ್ ವಂದಿಸಿದರು.