Wednesday, September 23, 2009

ರಾಜ್ಯವನ್ನು ವಿದ್ಯುತ್ ಸ್ವಾವಲಂಬಿಯಾಗಿಸಲು 3ಹಂತದ ಯೋಜನೆ:ಇಂಧನ ಸಚಿವ ಈಶ್ವರಪ್ಪ

ಮಂಗಳೂರು,ಸೆ.22:ರಾಜ್ಯವನ್ನು ವಿದ್ಯುತ್ ಸ್ವಾವಲಂಬಿಯನ್ನಾಗಿಸಲು 3 ಹಂತದಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಇಂಧನ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಇಂದು ನಗರದ ಕದ್ರಿಯ ಹೆಚ್. ಆರ್. ಡಿ ಸೆಂಟರ್ ಕದ್ರಿಯಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ 33/11 ಕೆ.ವಿ.ವಿದ್ಯುತ್ ಉಪಕೇಂದ್ರಗಳ 33ಕೆವಿ ಭೂಗತ ಕೇಬಲ್ ಕಾಮಗಾರಿಗಳ ಪ್ರಾರಂಭ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ವಿತರಣಾ ನಿಯಂತ್ರಣ ಕೇಂದ್ರಗಳ ಕಟ್ಟಡ ಸಮುಚ್ಚಯದ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದರು. ರಾಜ್ಯದಲ್ಲಿ 10,000ಮೆ.ವ್ಯಾ ವಿದ್ಯುತ್ ಗೆ ಬೇಡಿಕೆ ಇದ್ದು ಪ್ರಸ್ತುತ 7,000 ಮೆ.ವ್ಯಾ ಉತ್ಪಾದಿಸಲಾಗುತ್ತಿದೆ. ಬೇಡಿಕೆ ಪೂರೈಸಲು 3,000 ಮೆ.ವ್ಯಾ ವಿದ್ಯುತ್ ಅಗತ್ಯವಿದ್ದು ಮೊದಲ ಹಂತವಾಗಿ ವಿದ್ಯಾರ್ಥಿಗಳಿಗೆ ಮತ್ತು ರೈತರ ಹಿತವನ್ನು ಗಮನದಲ್ಲಿರಿಸಿ 3ಸಾವಿರ ಕೋಟಿ ರೂ.ಮೌಲ್ಯದ ವಿದ್ಯುತ್ ಖರೀದಿಸಿ ಪೂರೈಸಲಾಗಿದೆ.ಎರಡನೇ ಹಂತದಲ್ಲಿ ಅಪೂರ್ಣವಾಗಿರುವ ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಎಲ್ಲಾ ಅಸಂಪ್ರಾದಾಯಿಕ ಇಂಧನ ಮೂಲಗಳಿಂದ ಹಾಗೂ ಸೌರಶಕ್ತಿಯಿಂದ 1250ಮೆ.ವ್ಯಾ ವಿದ್ಯುತ್ ಉತ್ಪಾದಿಸಿ ಸಮಸ್ಯೆ ನಿವಾರಣೆಗೆ ಯತ್ನಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.ಜೇವರ್ಗಿ, ಘಟಪ್ರಭ,ಗುಂಡ್ಯ,ಶಿವನಸಮುದ್ರ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಮೂರನೇ ಹಂತದಲ್ಲಿ ರಾಜ್ಯಕ್ಕೆ ಮುಂದಿನ 10 ವರ್ಷಗಳಿಗೆ ಬೇಕಾಗುವ ವಿದ್ಯುತ್ ಗೆ ಎನ್ ಟಿ ಪಿ ಸಿ ಯೊಂದಿಗೆ ಒಪ್ಪಂದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ಹಾಗೂ ನಗರಗಳಲ್ಲಿ ಕನಿಷ್ಠ 22 ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಅ.5 ರಂದು ಹೊಸಕೋಟೆಯಲ್ಲಿ ಮುಖ್ಯಮಂತ್ರಿಗಳು ನಿರಂತರ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
1234 ಹುದ್ದೆಗಳಿಗೆ ನೇರ ನೇಮಕಾತಿ ಹಾಗು ಹಾಲಿ ಕಾಂಟ್ರ್ಯಾಕ್ಟ್ ಬೇಸಿಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಪರ್ಮನೆಂಟ್ ಮಾಡಲಾಗುವುದು ಎಂದರು.ಪರಿಸರ ನಾಶದ ಹೆಸರಿನಲ್ಲಿ ಅಭಿವೃದ್ಧಿಗೆ ಅಡ್ಡಿಯಾದರೆ ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆಯಾಗಲಿದೆ.ಲಿಂಗನಮಕ್ಕಿ ಇಲ್ಲಿದಿದ್ದರೆ ಇಂದು ರಾಜ್ಯ ಕತ್ತಲಿನಲ್ಲಿರುತ್ತಿತ್ತು ಎಂದೂ ಅವರು ನುಡಿದರು.
ಸಮಾರಂಭದಲ್ಲಿ ಉಪಸ್ಥಿತಿಯನ್ನು ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು,ಜಿಲ್ಲೆಗೆ ನಿರಂತರ ವಿದ್ಯುತ್ ಗೆ ಪರಿಸರ ಇಲಾಖೆಸಂಪೂರ್ಣ ಸಹಕಾರ ನೀಡಲಿದೆ ಎಂದರು. ನವರಾತ್ರಿಯ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ವರ್ಧನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಯೋಗೀಶ್ ಭಟ್ ಅವರು,ನಿಗದಿತ ಸಮಯಮಿತಿಯಲ್ಲಿ ಜಿಲ್ಲೆಯಲ್ಲಿ 4 ಸಬ್ ಸ್ಟೇಷನ್ ರಚನೆಗೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು;ಭೂಗತ ಕೇಬಲ್ ಅಳವಡಿಕೆಗೆ ಹಾಗೂ ಯೋಜನೆಗಳ ಸಾಕಾರಕ್ಕೆ ಕೆಪಿಟಿಸಿಎಲ್ ನ ಸಹಕಾರದ ಅಗತ್ಯದ ಬಗ್ಗೆ ಸಚಿವರ ಗಮನ ಸೆಳೆದರು.ಸಭೆಯನ್ನುದ್ದೇಶಿಸಿ ಲೋಕಸಭಾ ಸದಸ್ಯ ನಳಿನ್ ಕುಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಮಹಾಪೌರ ಎಂ.ಶಂಕರ ಭಟ್ ಮಾತನಾಡಿದರು.ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮೋನಪ್ಪ ಭಂಡಾರಿ,ತಾಂತ್ರಿಕ ನಿರ್ದೇಶಕ ಸಿ. ಎಸ್. ಗಣೇಶ್, ಮುಖ್ಯ ಇಂಜಿನಿಯರ್ ಎಂ. ಮಹದೇವ್ ಉಪಸ್ಥಿತರಿದ್ದರು. ನಂತರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಯೋಜನೆಗಳ ಬಗ್ಗೆ ವಿವರಿಸಿದರು.