Friday, January 13, 2012

ಗಮನ ಸೆಳೆದ ಕಲಾ ಪ್ರಕಾರಗಳು...

ಹಿಂದೂಸ್ಥಾನಿಯಲ್ಲಿ ಗಮನ ಸೆಳೆದ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ
ಮಂಗಳೂರು ಜ.13: ಇಲ್ಲಿನ ದೇವಾಡಿಗರ ಭವನದಲ್ಲಿ ನಡೆದ ಹಿಂದೂಸ್ಥಾನಿ ಸಂಗೀತದಲ್ಲಿ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದ ಸ್ಪರ್ಧಾಳುಗಳು ವಿಶೇಷ ಮೆರುಗನ್ನು ನೀಡಿದರು.

ಕರ್ನಾಟಕವನ್ನು ಪ್ರತಿನಿಧಿಸಿದ ಧಾರವಾಡದ ಶಿವಾನಿ ಮಿರಾಜ್ಕರ್, ಶೃತಿ ತರಂಗ್ ರಾಗದ ಮೂಲಕ ತಮ್ಮ ಅಧ್ಬುತ ಪ್ರತಿಭೆಯನ್ನು ಪ್ರದರ್ಶಿಸಿದರು. ಧಾರವಾಡದಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಈಕೆ ಪ್ರಾಥಮಿಕ ಸಂಗೀತ ಶಿಕ್ಷಣವನ್ನು ಪಂಡಿತ್ ಚಂದ್ರಶೇಖರ್ ಪುರಾಣಿಕ್ ಮಠ್ ಹಾಗೂ ಪಂಡಿತ್ ಕೇವಲ್ ಕುಮಾರ್ ಅವರಲ್ಲಿ ಪ್ರಸ್ತುತ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ತಂದೆ ರಾಜೇಂದ್ರ ಕುಮಾರ್ ಮಿರಾಜ್ಕರ್, ತಾಯಿ ಸಾಧನಾ ಮಿರಾಜ್ಕರ್.

'ಯುವಜನೋತ್ಸವವನ್ನು ತುಂಬಾ ಚೆನ್ನಾಗಿ ಸಂಘಟಿಸಿದ್ದಾರೆ. ಎಲ್ಲರಿಗೂ ಎಲ್ಲ ಸವಲತ್ತುಗಳನ್ನು ನೀಡಲಾಗಿದೆ. ಸ್ಪರ್ಧೆಯ ಬಗ್ಗೆ ಹೇಳುವುದಾದರೆ ತುಂಬಾನೆ ಕಷ್ಟ ಇತ್ತು. ಸಾಧ್ಯವಾದಷ್ಟು ನಾನು ಮಾಡಿದ್ದೇನೆ. ದೇವರ ಕೃಪೆ ಇದ್ರೆ ಪ್ರಶಸ್ತಿ ಬರಬಹುದು. ಗ್ರಾಮೀಣ ಭಾಗದಿಂದ ಬಂದಂತಹ ಅನೇಕರು ಇದ್ದಾರೆ ಎಲ್ಲರಿಗೂ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ತಮ್ಮ ಅದ್ಭುತ ಕಂಠದೊಂದಿಗೆ ನೆರೆದವರನ್ನು ಮೋಡಿ ಮಾಡಿದ ಮತ್ತೊಂದು ಪ್ರತಿಭೆ ಎಂದರೆ ಪಶ್ಚಿಮ ಬಂಗಾಳದ ಇಮಾನ್ ಬಿಸ್ವಾಸ್. ಮುಶಿದಾಬಾದ್ನ ಪರಹಂಪುರದವಳಾದ ಈ ಅಪೂರ್ವ ಪ್ರತಿಭೆ ಆಶಿಶ್ ಕುಮಾರ್ ಬಿಸ್ವಾಸ್ ಹಾಗೂ ದೀಪಾಲಿ ಬಿಸ್ವಾಸ್ ಅವರ ಪುತ್ರಿ. ಈಕೆಯ ಗುರು ಪಂಡಿತ್ ಓಮಿಯೋ ರಂಜನ್. ' ಸ್ಪರ್ಧೆ ತುಂಬಾನೆ ಕಷ್ಟ ಇದೆ. ಕರ್ನಾಟಕದ ಪ್ರತಿನಿಧಿ ಅತ್ಯುತ್ತಮ ಗಾಯಕಿ. ತುಂಬಾ ಚೆನ್ನಾಗಿ ಹಾಡಿದ್ದಾಳೆ. ಅವಳನ್ನು ನಾನು ತುಂಬಾ ಹೊಗಳಿದರೆ ತಪ್ಪಾಗುವುದಿಲ್ಲ. ಏನೂ ಹೇಳೋಕೆ ಆಗಲ್ಲ. ಯುವಜನೋತ್ಸವ ತುಂಬಾ ಚೆನ್ನಾಗಿದೆ. ಉತ್ತಮ ಸವಲತ್ತುಗಳನ್ನು ನೀಡಿದ್ದಾರೆ' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

- ದರ್ಶನ್ ಬಿ.ಎಂ