ಸಭೆಯಲ್ಲಿ ಮಾತನಾಡಿದ ಸಿಇಒ ಡಾ ವಿಜಯ ಪ್ರಕಾಶ್ ಅವರು ಕೊರಗರಿಗೆ ಮನೆ ನೀಡುವುದಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸುವುದು ಅತೀ ಅಗತ್ಯವಾಗಿದೆ. ಇದನ್ನು ರಾಷ್ಟ್ರಕ್ಕೆ ಮಾದರಿಯಾಗುವಂತಹ ಯೋಜನೆಯನ್ನಾಗಿ ಮಾಡಲು ಸಾಧ್ಯವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸಾಧ್ಯವಾಗ್ತಾ ಇಲ್ಲ. 203 ಗ್ರಾ.ಪಂ.ಗಳಲ್ಲಿ ಆಂದೋಲನ ಮಾದರಿಯಲ್ಲಿ ಈ ಕೆಲಸ ಮಾಡದಿದ್ದಲ್ಲಿ ಸಮಸ್ಯೆ ಬಗೆಹರಿಯದು. ಇದನ್ನೊಂದು ಆಂದೋಲನದ ಮಾದರಿಯಲ್ಲಿ ನಡೆಸುವ. ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದೇ ದಿನ ಸಮೀಕ್ಷೆ ಮಾಡಿರಿ. ಸ್ಥಳೀಯ ಜನಪ್ರತಿನಿಧಿಗಳಿಗೆ, ತಾ.ಪಂ., ಜಿ.ಪಂ.ಸದಸ್ಯರಿಗೆ ಮಾಹಿತಿ ನೀಡಿ, ಇಲಾಖೆ ಕಾರ್ಯಸೂಚಿಯಂತೆ ಕಾರ್ಯಕ್ರಮ ಹಮ್ಮಿಕೊಂಡು ಸಮೀಕ್ಷೆ ಮಾಡಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರಿಸಲು ತಡಕಾಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಸಭೆಗೆ ಬರುವಾಗ ಸಂಪೂರ್ಣ ಮಾಹಿತಿ ಪಡೆದುಕೊಂಡೇ ಬರಬೇಕು. ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಬೇಕು. ಸಭೆಗೆ ಬಂದು ಮಾಹಿತಿ ನೀಡಲು ತಡಕಾಡಿದರೆ ಅಂತಹ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ನಾರಾವಿ ಸಾವ್ಯ ಶಾಲೆಯ ಮುಖ್ಯೋಪಾಧ್ಯಾಯರು ಕಳೆದ ನಾಲ್ಕೈದು ತಿಂಗಳಿನಿಂದ ಶಾಲೆಗೆ ಹಾಜರಾಗದೆ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡಿದ್ದಾರೆ.ಶಿಕ್ಷಣಾಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ನಾರಾವಿ ಸದಸ್ಯೆ ಸಿ.ಕೆ.ಚಂದ್ರಕಲಾ ಸಭೆಯ ಗಮನಕ್ಕೆ ತಂದಾಗ ಉತ್ತರಿಸಿದ ಸಿಇಒ ಅವರು ಈ ಬಗ್ಗೆ ವಿಶೇಷ ತನಿಖೆ ನಡೆಸಲು ಇಲಾಖೆಯ ಉಪನಿರ್ದೇಶಕ ಶಿವರಾಮೇ ಗೌಡ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಧನಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್, ಜನಾರ್ದನ ಗೌಡ ಉಪಸ್ಥಿತರಿದ್ದರು.