Wednesday, January 18, 2012

ಸೃಜನೋತ್ಸವ ಯಶಸ್ವಿಗೆ ಸಚಿವ ಪಾಲೆಮಾರ್ ಕರೆ

ಮಂಗಳೂರು,ಜನವರಿ.18: ಸ್ವಾಮಿ ವಿವೇಕಾನಂದ ಜನ್ಮದಿನದ ಹಿನ್ನಲೆಯಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 17ನೆ ರಾಷ್ಟ್ರೀಯ ಯುವ ಜನೋತ್ಸವವನ್ನು ಯಶಸ್ವಿಗೊಳಿಸಿದ ಜನತೆ ಇದೇ ತಿಂಗಳ 22ರಿಂದ 25ರವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುವ ಬಾಲ್ ಭಾರತ್ ಸೃಜನೋತ್ಸವವನ್ನು ಯಶಸ್ವಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಕರೆ ನೀಡಿದ್ದಾರೆ.ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 17 ನೇ ಯುವಜನೋತ್ಸವ ಅಧಿಕಾರಿಗಳು, ಸಂಘಸಮಸ್ಥೆಗಳು ಮತ್ತು ನಗರದ ಜನರ ಸಹಕಾರದಿಂದ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಇದೀಗ ಬಾಲ್ ಭಾರತ್ ಸೃಜನೋತ್ಸವ ಆರಂಭಗೊಳ್ಳಲಿದೆ. ಈಗಾಗಲೆ 69 ಲಕ್ಷ ರೂ.ವನ್ನು ಸರ್ಕಾರದ ವತಿಯಿಂದ ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, ಹೆಚ್ಚುವರಿ ರೂ.25 ಲಕ್ಷ ಕ್ಕೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.
ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ 30.60 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು,ಗುರುಪುರ ಹೋಬಳಿಯ 74 ಗ್ರಾಮೀಣ ರಸ್ತೆಗಳಿಗೆ 4.89 ಕೋಟಿ, ಕಾವೂರು ಕೆರೆ ಸಹಿತ ಇತರ ಕೆರೆಗಳ ಅಭಿವೃದ್ಧಿಗೆ 5 ಕೋಟಿ, ಮಳವೂರು-ಆದ್ಯಪಾಡಿ-ಉಣಿಲೆ ರಸ್ತೆಗೆ 4.50 ಕೋಟಿ, ಎಡಪದವು ಪೂಪಾಡಿಕಲ್ಲು-ಬೆಳ್ಳೆಚಾರು ರಸ್ತೆಗೆ 4 ಕೋಟಿ, ರುದ್ರಭೂಮಿ ಅಭಿವೃದ್ಧಿಗೆ 29 ಲಕ್ಷ, ದೇವಳಗಳ ಜೀರ್ಣೋದ್ಧಾರಕ್ಕೆ 1.15 ಕೋಟಿ, ಮಸೀದಿಗಳ ಅಭಿವೃದ್ಧಿಗೆ 1.25 ಕೋಟಿ, ಭಜನಾ ಮಂದಿರಗಳಿಗೆ 24 ಲಕ್ಷ, ಮುಚ್ಚೂರು-ಕಜೆಮನೆ-ಪೆರಾರ-ಕತ್ತಲ್ಸಾರ್ ರಸ್ತೆ ಡಾಮರೀಕರಣಕ್ಕೆ 1.20 ಕೋಟಿ, ಚರ್ಚುಗಳ ಅಭಿವೃದ್ಧಿಗೆ 5 ಲಕ್ಷ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಡ್ಯಾರುಪದವು ಅಶ್ವತ್ಥಕಟ್ಟೆ ರಸ್ತೆಗೆ 2.14 ಕೋಟಿ ಸಹಿತ 20 ಕಿ.ಮೀ. ಉದ್ದದ 12 ರಸ್ತೆಗಳ ಅಭಿವೃದ್ಧಿಗೆ 6.08 ಕೋಟಿ, ಕೈಕಂಬ ಕಾಮಪಾದೆ, ಬೈತುರ್ಲಿ, ನೀರುಮಾರ್ಗ ಕಲ್ಪನೆ, ಸಂಪಿಗೆ, ಅಶ್ವತ್ಥಪುರ, ನೀರಕೆರೆ ರಸ್ತೆಗಳ ಅಭಿವೃದ್ಧಿಗೆ 2 ಕೋಟಿ ಬಿಡುಗಡೆಗೊಂಡು ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ಜಲಸಂಪನ್ಮೂಲ ಇಲಾಖೆಯಿಂದ 4.35 ಕೋಟಿ ರೂ. ವೆಚ್ಚದಲ್ಲಿ ಅತ್ರಬೈಲು, ಗುರುಪುರ, ಸುಬಾಶಿತ್ ನಗರ, ಕಂದಾವರ, ಮೂಡುಪೆರಾರು, ತೆಂಕ ಉಳಿಪಾಡಿ, ಕೊಳಂಬೆ, ಬಡಗ ಎಡಪದವು, ಆದ್ಯಪಾಡಿ, ತಿರುವೈಲು, ಬೊಂಡಂತಿಲ ಗ್ರಾಮಗಳಲ್ಲಿ ಕೆರೆದಂತೆ ಮತ್ತು ತಡೆಗೋಡೆಗಳ 13 ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಸನ್ಮಾನ್ಯ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಪಾಲೆಮಾರ್ ತಿಳಿಸಿದರು.
ಮಂಗಳಾ ಕ್ರೀಡಾಂಗಣದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಸಿಂಥೆಟಿಕ್ ಟ್ರಾಕ್ ನಿರ್ಮಾಣಕ್ಕೆ ಮೊದಲ ಹಂತದಲ್ಲಿ 3.09 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಚಿವರು ನುಡಿದರು. ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.