Saturday, January 14, 2012

ಬೋಟ್ ಯಾನದ ಸವಿ ಸವಿದರ ಸಚಿವ

ಪಣಂಬೂರು ಕಡಲ ತೀರದಲ್ಲಿ ಬೋಟ್ ಯಾನದ ಸವಿಯಲ್ಲಿ ಯುವಜನತೆ

ಮಂಗಳೂರು: ಅದು ಬೆಳ್ಳಂ ಬೆಳಗ್ಗಿನ ಸಮಯ... ಕಿನಾರೆಯುದ್ದಕ್ಕೂ ಜನ ಜಂಗುಳಿ, ಯುವಜನತೆ ನೀರಿನಾಟದಲ್ಲಿ ತೊಡಗಿದ್ದರು... ಅಲೆಗಳಬ್ಬರ ಜೋರಾಗಿಯೇ ಇತ್ತು. ಕಿನಾರೆಯಲ್ಲಿ ನಾಡದೋಣಿಗಳು, ಮೋಟಾರ್ ಅಳವಡಿಸಿದ ಬೋಟುಗಳು, ಸ್ಪೀಡ್ ಬೋಟುಗಳು, ವಾಟರ್ ಸ್ಪೋರ್ಡ್ಸ್ ಬೋಟುಗಳು ಸಿದ್ಧವಾಗಿದ್ದವು. ಭೋರ್ಗರೆವ ಕಡಲಲ್ಲೂ ಸಾಹಸ ಮಯ ವಾಟರ್ ಬೋಟ್ ರೋಮಾಂಚಕಾರಿಯಾಗಿದ್ದವು. ಧೈರ್ಯಮಾಡಿ ಬೋಟ್ ಏರಿ ಕುಳಿತು ನೀರು ಚಿಮ್ಮಿಸುತ್ತಾ , ವಾಲುತ್ತಾ ಸಾಗುವ ವಾಟರ್ ಬೋಟ್ ಯಾನ ಮುಗಿಸಿದ ಯುವಜೋಡಿಗಳು ಕಿನಾರೆಗೆ ಮರಳುತ್ತಿದ್ದರು. ಬೆನ್ನು ಬೆನ್ನಿಗೆ ಒಂದರ ಹಿಂದೊಂದರಂತೆ ನುಗ್ಗಿ ಬರುವ ಅಲೆಗಳ ಮಧ್ಯೆ ನೀರ ಸೀಳುತ್ತಾ ನೀರ ನಡುವೆ ಸಾಗುವ ಸಾಹಸೀ ಬೋಟ್ ಯಾನ ಹೊಸ ಅನುಭವ ನೀಡುತ್ತಿದ್ದರೆ , ಇತ್ತ ಕಿನಾರೆಯುದ್ದಕ್ಕೂ ನಿಂತಿದ್ದ ಹಲವು ಮಂದಿ ಅದರ ಸವಿ ಸವಿಯುತ್ತಿದ್ದರು. ಅಕ್ಷರಶಃ ಪಣಂಬೂರು ಕಡಲ ಕಿನಾರೆಯಲ್ಲಿ ಯುವಜನತೆ ನೀರಿನಾಟದಲ್ಲಿ ಮಗ್ನರಾಗಿದ್ದರು.
ಉಸ್ತುವಾರಿಯ ಬೋಟ್ ಯಾನ
ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಬೋಟ್ ಯಾನದ ಸವಿ ಸವಿದರು. ಇದು ಸಂಪೂರ್ಣ ಯುವಜನತೆಗೋಸ್ಕರ ಏರ್ಪಡಿಸಿದ ಉತ್ಸವವಾಗಿದೆ. ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಮುದ್ರದಲ್ಲಿ ಬೋಟ್ ಯಾನ ಒಂದು ಹೊಸ ಅನುಭವ. ಸುಮಾರು ಎರಡು ಗಂಟೆಗಳ ಕಾಲ ಬೋಟಿನಲ್ಲಿ ಯಾನ ನಡೆಸಿದ್ದೇನೆ. ಈಗ ಬೇಕಾದರೆ ನಾನೊಬ್ಬನೇ ಹೋಗಿ ಬರುವಷ್ಟು ಧೈರ್ಯ ನನಗೆ ಬಂದಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.


- ಹರ್ಷ ಪದ್ಯಾಣ