Friday, January 27, 2012

ಕದ್ರಿ ದೇವಾಲಯ: ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿ ಪರಿಶೀಲನಾ ಸಭೆ

ಮಂಗಳೂರು,ಜನವರಿ,27: ಕದ್ರಿ ದೇವಾಲಯದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಸದ್ಬಳಕೆ ಕುರಿತಂತೆ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ಇಂದು ಯುವಜನಸೇವಾ ಇಲಾಖೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.ಪ್ರವಾ ಸೋದ್ಯಮ ಇಲಾಖೆಯಿಂದ 1.27 ಕೋಟಿ ರೂ.ಗಳು ಬಿಡುಗಡೆ ಯಾಗಿದ್ದು, ಆದ್ಯತೆಯ ಮೇರೆಗೆ ಯಾತ್ರಾರ್ಥಿಗಳ ಅನುಕೂಲಕ್ಕೆ ಶೌಚಾಲಯ ಗಳನ್ನು ನಿರ್ಮಿಸಲು ನಿರ್ಧರಿ ಸಲಾಯಿತು. 20ಲಕ್ಷ ರೂ.ಗಳನ್ನು ಈ ಸಂಬಂಧ ನಿರ್ಮಿತಿಯವರಿಗೆ ನೀಡಲಾಗಿದ್ದು, ಕೆಲಸ ಆರಂಭಿಸಲು ಸಭೆಯಲ್ಲಿ ಸೂಚಿಸಲಾಯಿತು. ಆವರಣಗೋಡೆ ನಿರ್ಮಾಣ, ನೀರು ಶೇಖರಣಾ ಟ್ಯಾಂಕ್ (ಸಂಪು) ನ್ನು ನಿರ್ಮಿಸಲು ಸಭೆ ಅನುಮೋದನೆ ನೀಡಿತು.
ಇನ್ನುಳಿದ ಹಣವನ್ನು ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಗೆ ಸದ್ವಿನಿಯೋಗಿಸಲು ನೀಲಿ ನಕಾಶೆ ತಯಾರಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಭೆ ನಿರ್ಧರಿಸಿತು. ಮಠದ ಕೆಳಗಿರುವ ಪಾಂಡವರ ಗುಹೆ ಬಳಿ ಇರುವ ಚಿಲಿಂಬಿ ಕೆರೆ ಅಭಿವೃದ್ಧಿಗೆ, ಒಳಗೆ ಚಪ್ಪರ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಕಾರ್ಪೋರೇಟರ್ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.