Thursday, January 12, 2012

ಟೊಪ್ಪಿ ಮಹಿಮೆ...

ಇರ್ಷಾದ್ ವೇಣೂರು

ಟೊಪ್ಪಿ ಬೇಕಾ ಟೊಪ್ಪಿ... ಎಂಥಾ ಟೊಪ್ಪಿ ಚಿನ್ನದ ಟೊಪ್ಪಿ ಎಷ್ಟು ರೂಪಾಯಿ,ಸಾವಿರ ರೂಪಾಯಿ ಹಾಡು ಮಕ್ಕಳ ಬಾಯಲ್ಲಿ ನೀವು ಕೇಳಿರಬಹುದು. ಮಂಗಳೂರಿನ 17 ನೇ ರಾಷ್ಟ್ರೀಯ ಯುವಜನೋತ್ಸವದ ಸುತ್ತ ಮುತ್ತ ಈ ಹಾಡಿನ ಪ್ರತಿರೂಪದಂತೆ ಕಂಡುಬರುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾವಿರಾರು ಯುವ ಮನಸ್ಸುಗಳ ತಲೆಯನ್ನು ಬೇರೆ ಬೇರೆ ಟೊಪ್ಪಿಗಳು ಆವರಿಸಿಕೊಂಡಿವೆ. ಅದನ್ನು ನೋಡುವುದೇ ಒಂದು ಮಜಾ.

ಮಂಗಳೂರಿನ ಜನತೆಗೆ ಬೇರೆ ಬೇರೆ ಟೊಪ್ಪಿಗಳನ್ನು ನೋಡುವ ಅವಕಾಶ ಸಿಕ್ಕಿದೆ. ಬೇರೆ ರಾಜ್ಯದ ಜನರ ಟೊಪ್ಪಿಗಳನ್ನು ಕಂಡು ಮಂಗಳೂರಿಗರು ಆಕರ್ಷಿತರಾಗುತ್ತಿದ್ದಾರೆ. ಆ ಟೊಪ್ಪಿ ಹಾಕಿದವರ ಜೊತೆ ವನ್ ಫೊಟೋ ಪ್ಲೀಸ್ ಎಂದು ಕ್ಯಾಮರಾಕ್ಕೆ ಪೋಸು ಕೊಡುತ್ತಿರುವ ದೃಶ್ಯ ನೋಂದಣಿ ನಡೆಯುತ್ತಿರುವ ಟಿ.ಎ. ಪೈ ಸಭಾಂಗಣದ ಸುತ್ತ ಸಾಮಾನ್ಯವಾಗಿ ಕಂಡುಬರುತ್ತಿತ್ತು.

ಕೆಲವರು ಟೊಪ್ಪಿ ಹಾಕಿಕೊಂಡವರ ಪರಿಚಯ ಮಾಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಟೊಪ್ಪಿ ಹಾಕಿಕೊಂಡವರ ಟೊಪ್ಪಿ ಬಯೋಡೆಟಾ ಕೇಳುವುದರಲ್ಲಿ ನಿರತರಾಗಿದ್ದರು. ದಾರಿಯುದ್ದಕ್ಕೂ ನಿಲ್ಲಿಸಿ ಫೊಟೋ ತೆಗೆಸಿಕೊಳ್ಳುವ ಇಂಥವರಿಂದ ಅತ್ತಿತ್ತ ಅಡ್ಡಾಡುವವರಿಗೂ ಕಷ್ಟವಾಗುತ್ತಿತ್ತು. ಟೊಪ್ಪಿ ಹಾಕಿಕೊಂಡ ಸ್ವಯಂ ಸೇವಕರಂತೂ ಪ್ಲೀಸ್ ಸರ್... ಸ್ವಲ್ಪ ಬದಿಗೆ ನಿಲ್ಲಿ ಎಂದು ಸಮಾಧಾನ ಪಡಿಸುವುದರಲ್ಲೇ ನಿರತರಾಗಿದ್ದರು.
ಟೋಪಿ ಹಾಕಿಕೊಂಡಿರುವ ಸರ್ದಾರ್ಜಿಗಳ ಪ್ರಪಂಚ ಒಂದಾದರೆ, ಮಣಿಪುರದ ಸಾಂಪ್ರಾದಾಯಿಕ ಟೋಪಿ ತೊಟ್ಟ ಲಲನಾಮಣಿಗಳ ಪ್ರಪಂಚ ಇನ್ನೊಂದು. ನೇಪಾಳಿ ಢಾಕಾ ಟೋಪಿಯನ್ನು ನೋಡೋದೇ ಚಂದ. ಅವರ ಟೊಪ್ಪಿ ನೋಡಿದ ಹುಡುಗರಂತೂ ಜೊತೆಗೆ ನಿಂತುಕೊಂಡು ಫೊಟೋ ತೆಗೆಸಿಕೊಳ್ಳುತ್ತಿದ್ದರು. ಟೊಪ್ಪಿ ಹಾಕಿಕೊಂಡಿರುವ ಪೊಲೀಸ್ ಮಾಮ ಕ್ಯಾಮರಾ ಹಿಡಿದು ಫೊಟೋ ತೆಗೆಯುತ್ತಾ, ಆ ಕಡೆ ಈ ಕಡೆ ಇಣುಕುತ್ತಾ, ಬೇಸರವಾದಾಗ ಕೈಯಲ್ಲಿರುವ ಲಾಠಿಗೆ ಮುತ್ತು ಕೊಡುತ್ತಾ ತನ್ಮಯರಾಗಿದ್ದರು!






ಜೀ ಹೇ ಹಮಾರಾ ರಾಜ್ಯ್ ಕಾ ಸಾಂಪ್ರದಾಯಿಕ್ ಟೋಪಿ ಹೇ, ಹಮ್ ಸಬ್ ಏ ಹೀ ಪೆಹನ್ತೇ ಹೇ( ಇದು ನಮ್ಮ ರಾಜ್ಯದ ಸಾಂಪ್ರದಾಯಿಕ ಟೋಪಿ. ನಾವೆಲ್ಲ ಇದನ್ನು ಹಾಕಿಕೊಳ್ಳುತ್ತೇವೆ) ಎಂದರು ಹಿಮಾಚಲ ಪ್ರದೇಶದ ಶಿಮ್ಲಾದ ಪ್ಯಾರೀ ಲಾಲ್. 'ಹಮ್ ಇಂಫಾಲ್ ಸೇ ಆಯೇ ಹೇ ಜಿ. ಹಮಾರಾ ಸಾಂಪ್ರದಾಯಿಕತಾ ಕೋ ದಿಖಾನೇ ಕೋ ಏಕ್ ಅಚ್ಚಾ ಮಾಹೋಲ್ ಮಿಲ್ ಗಾಯಾ ಹೆ ಜೀ'(ನಾವು ಇಂಫಾಲದಿಂದ ಬಂದಿದ್ದೇವೆ. ನಮ್ಮ ಸಂಸ್ಕೃತಿಯನ್ನು ತೋರಿಸಲು ಇದೊಂದು ಉತ್ತಮ ವೇದಿಕೆಯಾಗಿದೆ) ಎಂದರು ಇಂಫಾಲದ ಸ್ಪರ್ದಿ ಇದಾಶಿಶ.
ಸ್ಪರ್ದಾಳುಗಳು ಮಾತ್ರ ಟೋಪಿ ಹಾಕ್ಕೊಂಡಿದ್ದಲ್ಲ. ಬಿಸಿಲಿನ ರಕ್ಷಣೆಗೆ ಸ್ವಯಂ ಸೇವಕರು, ಸಂಘಟಕರು, ಅತಿಥಿಗಳು ಟೊಪ್ಪಿ ಹಾಕಿ ಮಿಂಚುತ್ತಿದ್ದರು. ಅಂತೂ ಬೇರೆ ಬೇರೆ ಟೊಪ್ಪಿಗಳನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶ.