Monday, January 16, 2012

ತುಳುವಿನಲ್ಲಿ ಮಾತು ಆರಂಭಿಸಿದ ಮುಖ್ಯಮಂತ್ರಿ...

ಮಂಗಳೂರು: ತುಳುನಾಡಿನ ಮಣ್ಣಿನ ಮಗ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ತಮ್ಮ ಭಾಷಣವನ್ನು ತುಳು ಭಾಷೆಯಲ್ಲಿ ಪ್ರಾರಂಬಿಸುವ ಮೂಲಕ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಸಜಸ್ತೋಮದ ಅಪಾರ ಮೆಚ್ಚುಗೆಗೆ ಕರತಾಡನಕ್ಕೆ ಪಾತ್ರರಾದರು.
"ಯುವಜನೋತ್ಸವನ್ ಅತ್ಯಂತ ಯಶಸ್ವಿಮಾಲ್ತಿನ ನಿಕ್ಲೆಗ್ ಪೂರಾ ಸೊಲ್ಮೆಲು"ಎಂಬ ಹೃದಯಾಂತರಾಳದ ನುಡಿಗಳು ಸೇರಿದ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.

ಮಂಗಳೂರಿನ ಜನತೆಯ ಸಹಕಾರ, ಎಲ್ಲ ಅಧಿಕಾರಿಗಳ ಸಹಕಾರ, ಮಾಧ್ಯಮಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಈ ಸಮ್ಮೇಳನ ಮೂಡಿಬಂದಿದೆ. ಭಾವೋದ್ವೇಗಕ್ಕೆ ಒಳಗಾಗುವ ಸಂದರ್ಭ ಇದು. ಯಶಸ್ವೀ ಯುವಜನೋತ್ಸವ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಬಜೆಟ್ ನಲ್ಲಿ ಅನುದಾನ

ಯುವಜನತೆ ಅಭಿವೃದ್ಧಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ರಾಜ್ಯದ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಮತ್ತಷ್ಟು ಬಲಿಷ್ಠಪಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಯುವಜನರ ಆಶೋತ್ತರಗಳನ್ನು ಈಡೇರಿಸಲು ಕರ್ನಾಟಕ ಸರಕಾರ ಬದ್ಧವಿದ್ದು ಈ ಮೂಲಕ ದೇಶದ ಐಕ್ಯತೆ ನೆಲೆಸಲು ಅನುವಾಗುವಂತೆ ದೇಶ ಕಟ್ಟುವ ಕೆಲಸಕ್ಕೆ ಅಣಿಯಾಗಿದೆ ಎಂದರು.
ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಮೂಲಕ ಯುವ ಶಕ್ತಿಗೆ ಪ್ರೇರಕವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಯುವಜನತೆಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಲಿದೆ ಎಂದವರು ತಿಳಿಸಿದರು.