Thursday, January 13, 2011

ಘನತ್ಯಾಜ್ಯ ವಿಲೇವಾರಿಗೆ ಕಾಲಮಿತಿ ನಿಗದಿ

ಮಂಗಳೂರು,ಜನವರಿ.13: ವೈಜ್ಞಾನಿಕವಾಗಿ ಕಸ ವಿಂಗಡಣೆ ಮನೆಗಳಿಂದಲೇ ಆರಂಭವಾಗಬೇಕು; ಈ ಬಗ್ಗೆ ಜನರನ್ನು ಒಪ್ಪಿಸುವ ಹೊಣೆ ಅಧಿಕಾರಿಗಳದ್ದು. ಎಲ್ಲ ತಾಲೂಕು, ಪುರಸಭೆಗಳು ನಿಗದಿತ ಕಾಲಮಿತಿಯೊಳಗೆ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಆದೇಶಿಸಿದರು.

ಅವರು ಜನವರಿ 12ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ತ್ಯಾಜ್ಯ ವಿಲೇವಾರಿ ಸಮಾಜದ ಅಗತ್ಯ ಎಂಬುದನ್ನು ಜನರಿಗೆ ತಿಳಿಸಬೇಕು. ಅವರಿಗೆ ಸರಿಯಾಗಿ ಮನವರಿಕೆ ಮಾಡುವುದರಿಂದ ಈ ತ್ಯಾಜ್ಯ ವಿಲೇ ಘಟಕದ ಬಗ್ಗೆಗಿರುವ ಸಮಸ್ಯೆಗಳು ಪರಿಹಾರವಾಗುತ್ತದೆ ಬೆಳ್ತಂಗಡಿಯಲ್ಲಿ ಜನವರಿ 25 ರಿಂದ ಮನೆಗಳಿಂದಲೇ ಕಸ ವಿಭಜಿಸಿ ತ್ಯಾಜ್ಯ ವಿಲೇ ಘಟಕಕ್ಕೆ ತರುವ ಕಾರ್ಯವನ್ನು ಆರಂಭಿಸಲಾಗುವುದು. ಮೂಡಬಿದ್ರೆಯಲ್ಲಿ ಫೆಬ್ರವರಿ ಒಂದರಿಂದ, ಮುಲ್ಕಿಯಲ್ಲಿ ಜನವರಿ 20 ರಿಂದ, ಸುಳ್ಯದಲ್ಲಿ ಜನವರಿ 25 ರಿಂದ, ಪುತ್ತೂರಿನಲ್ಲಿ ಫೆಬ್ರವರಿ ಒಂದರಿಂದ, ಉಳ್ಳಾಲದಲ್ಲಿ ಜನವರಿ 27 ರಿಂದ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇ ಮಾಡಲು ಆರಂಭಿಸಲಾಗುವುದು ಎಂದು ಸಂಬಂಧ ಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಇತರ ಯೋಜನೆಗಳಡಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಎಸ್ ಜೆ ಎಸ್ ಆರ್ ವೈ ನಡಿ ಬರುವ ಸಾಮಾಜಿಕ ಸೇವಾ ಚಟುವಟಿಕೆ ಯೋಜನೆಯಡಿ ಜನವರಿ ಮಾಹಿತಿ ನೀಡಲು ಸೂಚಿಸಿದರು. ವಾಣಿಜ್ಯ ಉದ್ದಿಮೆಗಳಿಗೆ ಅನುಮತಿ ನೀಡುವ ವಿಷಯದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾನೂನು ಪಾಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ನಗರಗಳಲ್ಲಿ ರಾರಾಜಿಸುತ್ತಿರುವ ಹೋರ್ಡಿಂಗ್ಸ್ ಹಾಗೂ ಜಾಹೀರಾತು ಭಿತ್ತಿಪತ್ರಗಳಲ್ಲಿ ಅವಧಿ ಮುಗಿಯುವ ಬಗ್ಗೆ ಮಾಹಿತಿಯಿರಬೇಕೆಂದರು. ವ್ಯಾಪಾರ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಪರವಾನಿಗೆ ನೀಡಲು ಹಾಗೂ ನವೀಕರಣ ಕಾರ್ಯ ಜನವರಿ 31 ರೊಳಗೆ ಸಂಪೂರ್ಣಗೊಳ್ಳಬೇಕು ಎಂದರು. ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.