Wednesday, January 5, 2011

ದ.ಕ.ಜಿಲ್ಲೆಯಲ್ಲಿ 23716 ಕೋಟಿ ರೂ.ಗಳ ಬ್ಯಾಂಕಿಂಗ್ ವ್ಯವಹಾರ

ಮಂಗಳೂರು, ಜನವರಿ 05 : ಬ್ಯಾಂಕಿಂಗ್ ತವರೂರಾದ ದಕ್ಷಿಣ ಕನ್ನಡ ಜಿಲ್ಲೆ ಸೆಪ್ಟೆಂಬರ್ 2010 ರ ವೇಳೆಗೆ 23,716 ಕೋಟಿ ರೂ.ಗಳ ವಹಿವಾಟನ್ನು ಮಾಡಿದ್ದು,ಇಲ್ಲಿನ 420 ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ರೂ 15,435 ಕೋಟಿ ಹಾಗೂ ರೂ.8371 ಕೋಟಿ ಮುಂಗಡವಿದೆಯೆಂದು ಸಿಂಡಿಕೇಟ್ ಬ್ಯಾಂಕಿನ ಉಪ ಮಹಾ ಪ್ರಬಂಧಕರಾದ ಜಿ.ಎಸ್ .ಶೆಣೈಯವರು ತಿಳಿಸಿದರು.ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬ್ಯಾಂಕಿಂಗ್ ವ್ಯವಹಾರ ಪ್ರತಿನಿಧಿ ಮೂಲಕ ಜಿಲ್ಲೆಯ 2000 ಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 213 ಹಳ್ಳಿಗಳಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುವಂತಹ ವ್ಯವಸ್ಥೆಯನ್ನು ಜಿಲ್ಲೆಯ 8 ಪ್ರಮುಖ ಬ್ಯಾಂಕುಗಳ ಮೂಲಕ ಮಾಡಲಾಗಿದೆಯೆಂದರು.2010-11ನೇ ಸಾಲಿನಲ್ಲಿ ಹಿಂದುಳಿದ ವರ್ಗ ಅಲ್ಪ ಸಂಖ್ಯಾತರ ಅಭಿವೃದ್ಧಿ ಕಾರ್ಪೋರೇಷನ್ ಚೈತನ್ಯ ಯೋಜನೆಯಡಿ 106 ಜನರಿಗೆ,ಸ್ವಾವಲಂಬನಾ ಯೋಜನೆಯಡಿ 193 ಜನರಿಗೆ ಸಾಲ ದೊರೆತಿದೆ.ಪರಿಶಿಷ್ಟ ಜಾತಿ,ಪಂಗಡದ ಅಭಿವೃಧ್ಧಿ ಕಾರ್ಪೋರೇಷನ್ ಯೋಜನೆಯಡಿಯಲ್ಲಿ 111 ಜನರಿಗೆ ಸಾಲ ಬಿಡುಗಡೆ ಮಾಡಿದೆ.ಈ ವರ್ಷ ಒಟ್ಟು 28756 ಸ್ವಸಹಾಯ ಸಂಘಗಳು ಬ್ಯಾಂಕ್ ಗಳಿಂದ ಸಾಲ ಪಡೆದಿದೆ.ಇವುಗಳಿಗೆ 239 ಕೋಟಿ ಸಾಲ ಬಿಡುಗಡೆಯಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಇವರು ಮಾತನಾಡಿ ಜಿಲ್ಲೆಯಲ್ಲಿ ಕೃಷಿ ವಲಯಕ್ಕೆ ಇನ್ನೂ ಹೆಚ್ಚಿನ ಸಾಲವನ್ನು ಎಲಾ ಬ್ಯಾಂಕುಗಳು ನೀಡಬೇಕೆಂದು ಸಲಹೆ ಮಾಡಿದರು.ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಉದಯಕುಮಾರ್ ಹೊಳ್ಳ ಇವರು ಕಾರ್ಯಸೂಚಿಯನ್ನು ಮಂಡಿಸಿದರು. ಸಮಿತಿಯು ಬ್ಯಾಂಕ್ ಗಳ ಕಾರ್ಯ ಕ್ಷಮತೆಯನ್ನು ಪರಿಶೀಲಿಸಿದ್ದು, ಜಿಲಾ ಆದ್ಯತಾ ವಲಯ ಸಾಲ ಯೋಜನೆ 2010-11 ಅಡಿಯಲ್ಲಿ 2ನೇಯ ತ್ರೈಮಾಸಿಕದಲ್ಲಿ ವಾರ್ಷಿಕವಾಗಿ 2276 ಕೋಟಿ ರೂ.ಗುರಿ ನಿಗಧಿಯಾಗಿದ್ದು,1112 ಕೋಟಿ ರೂ.ಗಳ ಸಾಲ ಬಿಡುಗಡೆಯಾಗಿದ್ದು,ವಾರ್ಷಿಕ ಗುರಿಯ ಶೇಕಡಾ 41 ಸಾಧನೆಯಾಗಿದೆ. ಕೃಷಿಗಾಗಿ 663 ಕೋಟಿ,ಸಣ್ಣ ಕೈಗಾರಿಕೆಗೆ 212 ಕೋಟಿ,ಮತ್ತಿತರ ಆದ್ಯತಾ ವಲಯಕ್ಕೆ 237 ಕೋಟಿ ಸಾಲ ನೀಡಲಾಗಿದೆ.
ಸಭೆಯಲ್ಲಿ ಆರ್.ಬಿ.ಐ ಪ್ರಬಂಧಕರು,ಬ್ಯಾಂಕ್ ಗಳ ಕಾರ್ಯ ನಿರ್ವಹಣಾಧಿಕಾರಿಗಳು,ಜಿಲ್ಲಾ ಸಂಪರ್ಕಧಿಕಾರಿ,ಜಿಲ್ಲಾ ಪಂಚಾಯತ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.