Tuesday, January 11, 2011

ಸಾಮಾಜಿಕ ಶಾಂತಿಗೆ ಪೊಲೀಸರ ಕೊಡುಗೆ ಗಮನೀಯ:ಸುಬೋಧ್ ಯಾದವ್

ಮಂಗಳೂರು, ಜನವರಿ11:ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಅರಕ್ಷಕರ ಸಮಯ ಪ್ರಜ್ಞೆ ಮುಂಜಾಗ್ರತೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಾಮಾಜಿಕ ಶಾಂತಿ ಮತ್ತು ಸೌಖ್ಯ ನೆಲೆಸಿದೆ ಎಂದು ದಕ್ಷಿಣ ಕನ್ನಡ ಪೊಲೀಸರ ಕಾರ್ಯ ವೈಖರಿಯನ್ನು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಪ್ರಶಂಸಿಸಿದರು.
ಅವರು ಇಂದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ನಿರಂತರವಾಗಿವಿವಿಧ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಶಾಂತಿ,ಸುವ್ಯವಸ್ಥೆಯಪಾಲನೆಯಲ್ಲಿ ಲೋಪಗಳಿಲ್ಲ.ಪೊಲೀಸರ ಬಿಡುವಿಲ್ಲದ ಕೆಲಸದ ನಡುವೆ ವಾರ್ಷಿಕ ಕ್ರೀಡಾಕೂಟ ಅವರಲ್ಲಿ ನವೋಲ್ಲಾಸ ಮೂಡಿಸಿ ಚೈತನ್ಯ ತುಂಬಲಿದೆ.ಕ್ರೀಡೆಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಲು ಪೊಲೀಸರಿಗೆ ಕರೆಯಿತ್ತರು. ಮಂಗಳೂರುಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಎಲ್ಲರನ್ನು ಸ್ವಾಗತಿಸಿದರು. ಪೊಲೀಸ್ ಅಧೀಕ್ಷಕರಾದ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ವಂದಿಸಿದರು.
ದಿನಾಂಕ 11-1-11 ರಿಂದ 12-1-11 ರ ವರೆಗೆ ಎರಡು ದಿನಗಳ ಕಾಲ ನಡೆಯುವ ಕ್ರೀಡಾ ಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮಂಗಳೂರು,ಪಣಂಬೂರು, ಪುತ್ತೂರು ಉಪ ವಿಭಾಗ ಹಾಗೂ ಮಹಿಳಾ ಪೊಲೀಸ್ ತಂಡಗಳು ಸೇರಿದಂತೆ 5 ತಂಡಗಳು ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿವೆ.ಆರ್.ಎಸ್.ಐ.ಸತೀಶ್ ಕ್ರೀಡಾ ಪ್ರಮಾಣವಚನ ಬೋಧಿಸಿದರು.