Friday, January 14, 2011

ಅಂಬೇಡ್ಕರ್ ಭವನ ನಿರ್ಮಾಣ ಪೂರ್ವಭಾವಿ ಸಭೆ

ಮಂಗಳೂರು, ಜನವರಿ.14:ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನ ಮಂಗಳೂರಿನಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಉರ್ವಸ್ಟೋರಿನಲ್ಲಿ 1.50 ಎಕರೆ ಸ್ಥಳ ಕಾದಿರಿಸಿದ್ದು ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಅಂಬೇಡ್ಕರ್ ಭವನದ ರೂಪುರೇಷೆ ತಯಾರಿ ಸಂಬಂಧ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ, ಉಪಕಾರ್ಯದರ್ಶಿ ಶಿವರಾಮೇಗೌಡ, ಕಟ್ಟಡ ವಿನ್ಯಾಸಗಾರರು, ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಭಾಕರ್ ನಾಯಕ್ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಭವನದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಐದು ಕೋಟಿ ರೂ. ವೆಚ್ಚದಲ್ಲಿ ಸುಮಾರು 750 ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಸಭಾಭವನ ನಿರ್ಮಿಸಲು ಉದ್ದೇಶಿಸಲಾಯಿತು.ಭವ್ಯ ಪ್ರಾಂಗಣ, ಅಂಬೇಡ್ಕರ್ ಪ್ರತಿಮೆ, ಮೊದಲ ಮಹಡಿಯಲ್ಲಿ ವಾಸ್ತವ್ಯಕ್ಕೆ ಯೋಗ್ಯ ಕೋಣೆಗಳು, ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಸಲಹೆಗಳು ವ್ಯಕ್ತವಾದವು. ಹಂತ ಹಂತವಾಗಿ ಜಿಲ್ಲಾ ಪಂಚಾಯಿತಿ ವತಿಯಿಂದ ಒಂದು ಕೋಟಿ ರೂ., ಮಹಾ ನಗರಪಾಲಿಕೆಯಿಂದ ಎರಡು ಕೋಟಿ ರೂ., ಸರಕಾರದಿಂದ ಒಂದು ಕೋಟಿ ರೂ., ಮೂಡಾದಿಂದ 25 ಲಕ್ಷ ಸೇರಿದಂತೆ ಮತ್ತೆ ಉಳಿದ ಹಣವನ್ನು ಸರಕಾರದಿಂದ ಕೋರಲು ಸಭೆ ನಿಶ್ಚಯಿಸಿತು. ಸಭೆ ಮುಗಿದ ಬಳಿಕ ಕಟ್ಟಡ ವಿನ್ಯಾಸ ಸಂಬಂಧ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳನ್ನೊಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.