Saturday, January 29, 2011

ಪಶುಸಂಗೋಪನಾ ಇಲಾಖೆಯಿಂದ 70 ಸಾವಿರ ಕುಟುಂಬಗಳಿಗೆ ಶೇಕಡಾ 6ರ ಬಡ್ಡಿ ದರದಲ್ಲಿ ಸಾಲ ವಿತರಣೆ

ಮಂಗಳೂರು, ಜನವರಿ.29: ರಾಜ್ಯ ಸರಕಾರ ರೈತರಿಗೋಸ್ಕರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪಶುಸಂಗೋಪನಾ ಇಲಾಖಾ ವತಿಯಿಂದ ಪ್ರಸಕ್ತ ಸಾಲಿನಲ್ಲಿ 70 ಸಾವಿರ ಕುಟುಂಬಗಳಿಗೆ ಶೇಕಡಾ 6ರ ಬಡ್ಡಿ ದರದಲ್ಲಿ ಸಾಲ ವಿತರಿಸುವ ಯೋಜನೆಯಲ್ಲಿ 2 ಎಮ್ಮೆ ಹಾಗೂ 2 ಆಕಳನ್ನು ನೀಡುವ ಕಾರ್ಯಕ್ರಮ, ಕುರಿ ಸಾಕಾಣೆದಾರರಿಗೆ ಕುರಿಗಳನ್ನು ಖರೀದಿಸಲು ನೆರವು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ, ಸಮೂಹ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಸಚಿವರಾದ ಶ್ರೀ ರೇವು ನಾಯಕ್ ಬೆಳಮಗಿ ಅವರು ತಿಳಿಸಿದರು.
ಅವರಿಂದ ಪುತ್ತೂರಿನ ಕ್ಯೊಲದ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಮೈಸೂರು ವಿಭಾಗಮಟ್ಟದ ರೈತರ ಸಮಾವೇಶ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು. ಪಶುಗಳ ಆರೋಗ್ಯ ವರ್ಧನೆಗೆ ಪಶು ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಬ್ಬಂದಿಗಳ ಕೊರತೆಯಿದೆ ಎನ್ನುವುದನ್ನು ಸಮ್ಮತಿಸಿದರು.ಇಲಾಖೆಯಲ್ಲಿ 777 ಸಿಬ್ಬಂದಿಗಳ ಕೊರತೆಯಿದ್ದು, ಹುದ್ದೆ ಭರ್ತಿಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ, ಬಾಲಕೃಷ್ಣ ಸುವರ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.