Saturday, January 15, 2011

ಪಿಲಿಕುಳದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಸಚಿವ ಪಾಲೆಮಾರ್

ಮಂಗಳೂರು, ಜನವರಿ. 15: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಪಿಲಿಕುಳ ನಿಸರ್ಗಧಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಾರ್ಯಕಾರಿ ಸಮಿತಿಯನ್ನು ರಚಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಸೂಚಿಸಿದರು.
ಇಂದು ಪಿಲಿಕುಳ ನಿಸರ್ಗಧಾಮದಲ್ಲಿ ನಡೆದ ಪಿಲಿಕುಳ ನಿಸರ್ಗಧಾಮ ಸೊಸೈಟಿಯ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಪಿಲಿಕುಳ ನಿಸರ್ಗಧಾಮದ ಬಗ್ಗೆ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲೂ ಉತ್ತಮ ಅಭಿಪ್ರಾಯವಿದ್ದು, ಈ ಮಟ್ಟವನ್ನು ಇನ್ನಷ್ಟು ಉನ್ನತಕ್ಕೇರಿಸಲು ಎಲ್ಲರೂ ಶ್ರಮ ಪಡಬೇಕು; ಸರ್ಕಾರ ಈ ಸಂಬಂಧ ಅಭಿವೃದ್ಧಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ಉಪ ಸಭಾಪತಿಗಳಾದ ಎನ್. ಯೋಗೀಶ್ ಭಟ್ ಅವರು ಮಂಗಳೂರನ್ನು ಸಮಗ್ರವಾಗಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಮುದ್ರ, ನದಿ, ಬೆಟ್ಟವನ್ನೊಳಗೊಂಡ ವಿಶಿಷ್ಟ ಪ್ರಾಕೃತಿಕ ಸೊಬಗನ್ನು ಹೊಂದಿರುವ ಕರಾವಳಿ ಜಿಲ್ಲೆಯನ್ನು ಎಲ್ಲರ ಸಹಕಾರದಿಂದ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ಯೋಜನೆ ಪಿಲಿಕುಳದಿಂದ ಆರಂಭವಾಗಲಿ ಎಂದರು.
ಸಭೆಯಲ್ಲಿ ಶಾಸಕರಾದ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ಕಾರ್ಯನಿರ್ವಹಕ ನಿರ್ದೇಶಕ ಜೆ. ಆರ್. ಲೋಬೋ ಉಪಸ್ಥಿತರಿದ್ದರು. ನಿಸರ್ಗಧಾಮ ಸಮಿತಿಯ ಸದಸ್ಯರು ತಮ್ಮ ಅನಿಸಿಕೆಗಳನ್ನು ಸಭೆಯಲ್ಲಿ ಹಂಚಿಕೊಂಡರು.