Wednesday, January 19, 2011

ಅನಧಿಕೃತ ಧಾರ್ಮಿಕ ಕಟ್ಟಡ: 52 ಪ್ರಕರಣಗಳ ಬಗ್ಗೆ ಇಂದು ವಿಚಾರಣೆ

ಮಂಗಳೂರು, ಜನವರಿ.19: ಅನಧಿಕೃತ ಧಾರ್ಮಿಕ ನಿರ್ಮಾಣ ತೆರವು ನಿಟ್ಟಿನಲ್ಲಿ ಇಂದು 52 ಪ್ರಕರಣಗಳಲ್ಲಿ 19 ಪ್ರಕರಣಗಳನ್ನು ಸಂಬಂಧಪಟ್ಟವರೇ ತೆರವುಗೊಳಿಸಿದ್ದು, 15 ಪ್ರಕರಣ ತಕ್ಷಣವೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸೂಚನೆ ನೀಡಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾದ ಅನಧಿಕೃತ ನಿರ್ಮಾಣಗಳ ಕುರಿತು ಕೇಸ್ ಟು ಕೇಸ್ ಬೇಸಿಸ್ ಮೇಲೆ ಪ್ರಕರಣ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರತೀ ಬುಧವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತಿದೆ.
ಏಳು ಪ್ರಕರಣಗಳನ್ನು ಕಾನೂನು ಪ್ರಕಾರ, ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂಬುದರ ಬಗ್ಗೆ ಲಿಖಿತ ಮಾಹಿತಿ ಸಂಬಂಧಪಟ್ಟವರು ನೀಡಿದರೆ ಪರಿಗಣಿಸುವುದಾಗಿ ಹಾಗೂ 11 ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಿದ ಬಗ್ಗೆ ಲಿಖಿತ ವರದಿ ಸಲ್ಲಿಸಬೇಕು. ಸಭೆಗೆ ಹಾಜರಾಗುವ ಮುನ್ನ ಸಾಕಷ್ಟು ಪೂರ್ವ ತಯಾರಿ ನಡೆಸುವ ಬಗ್ಗೆ, ಹಾಗೂ ಲೋಕೋಪಯೋಗಿ ಇಲಾಖೆ ಈ ಸಂಬಂಧ ಇನ್ನಷ್ಟು ಸಹಕಾರ ನೀಡುವಂತೆ, ಯಾವ ಇಲಾಖೆಗಳ ಜಾಗದಲ್ಲಿ ಒತ್ತುವರಿಯಾಗಿದೆಯೋ ಅದೇ ಇಲಾಖೆಯವರೇ ನೋಟೀಸು ಜಾರಿ ಮಾಡುವ ಸೂಚನೆಯನ್ನು ಜಿಲ್ಲಾಧಿಕಾರಿಗಳು ಮತ್ತೊಮ್ಮೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸಿಇಒ ಶಿವಶಂಕರ್, ಮಂಗಳೂರು,ಪುತ್ತೂರು ಸಹಾಯಕ ಆಯುಕ್ತರು, ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಪಾಲ್ಗೊಂಡಿದ್ದರು.