Thursday, January 6, 2011

ರಾಷ್ಟ್ರೀಯ ಆನೆಕಾಲು ರೋಗ ನಿವಾರಣಾ ಕಾರ್ಯಕ್ರಮ

ಮಂಗಳೂರು,ಜ.06:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಗ್ರಾಮಾಂತರ, ಬಂಟ್ವಾಳ ಮತ್ತು ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಆನೆಕಾಲು ರೋಗ ನಿಯಂತ್ರಿಸಲು ಸಹಕಾರಿಯಾಗುವಂತೆ ಜನವರಿ 10ರಂದು ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ ಶ್ರೀರಂಗಪ್ಪ ಅವರು ಹೇಳಿದರು.
ಇಂದು ಅವರ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಾಮೂಹಿಕ ಔಷಧಿ ವಿತರಣೆ ಕುರಿತು ಮಾತನಾಡಿದ ಅವರು 8 ಜಿಲ್ಲೆಗಳಲ್ಲಿ ರೋಗ ನಿರೋಧಿಸಲು ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಒಟ್ಟು 234 ಗ್ರಾಮಗಳಲ್ಲಿ, 6 ನಗರಗಳಲ್ಲಿ 3,41,971 ಮನೆಗಳಲ್ಲಿ, 1494276 ಜನಸಂಖ್ಯೆಯನ್ನು ಗುರುತಿಸಲಾಗಿದ್ದು, 865 ಔಷಧಿ ವಿತರಣಾ ಕೇಂದ್ರಗಳಲ್ಲಿ, 5742 ಔಷಧಿ ವಿತರಕರು, 574 ಮೇಲ್ವಿಚಾರಕರು, ಯೋಜನೆಯ ಯಶಸ್ವೀ ಅನುಷ್ಠಾನಕ್ಕೆ ದುಡಿಯಲಿದ್ದಾರೆ ಎಂದು ಮಲೇರಿಯಾ ಡಾಕ್ಟರ್ ಅರುಣ್ ಕುಮಾರ್ ವಿವರಿಸಿದರು. ಫೈಲೇರಿಯಾ ರೋಗದ ಸೋಂಕು ಉಂಟಾದ ವ್ಯಕ್ತಿಯಲ್ಲಿ ಹಲವು ವರ್ಷದವರೆಗೆ ಯಾವುದೇ ರೋಗಗಳು ಕಾಣಿಸಿಕೊಳ್ಳದೆ ಸಾಮಾನ್ಯ ಜನರಂತೆ ರೋಗ ಪಸರಿಸುತ್ತಿರುತ್ತಾನೆ. ಈ ಕಾರಣದಿಂದ 2ವರ್ಷಕ್ಕೂ ಮೇಲ್ಪಟ್ಟ ಹಾಗೂ ಗರ್ಭಿಣಿಯರನ್ನು ಹೊರತುಪಡಿಸಿ ಡೈ ಇಥೈಲ್ ಕಾರ್ಬಾಮಜೈನ್ (ಡಿಇಸಿ) ಔಷಧಿಯನ್ನು ನೀಡಲಾಗುವುದು. ಇದು ಮನುಷ್ಯನ ರಕ್ತದಲ್ಲಿರುವ ಫೈಲೇರಿಯಾ ಜಂತುಗಳನ್ನು ನಾಶಪಡಿಸುತ್ತದೆ. 2ರಿಂದ 5ವರ್ಷಗಳು 100ಮಿ.ಗ್ರಾಂ ಪ್ರಮಾಣದ ಮಾತ್ರೆ, 5ರಿಂದ 14 ವರ್ಷ 100 ಮೀ ಗ್ರಾಂ ಪ್ರಮಾಣದ 2 ಮಾತ್ರೆ, 14ರಿಂದ ಮೇಲ್ಪಟ್ಟ 100 ಮೀ ಗ್ರಾಂ ಪ್ರಮಾಣದ 3 ಮಾತ್ರೆ ಆಹಾರದ ನಂತರ ನೀರಿನೊಂದಿಗೆ ಈ ಮಾತ್ರೆಯನ್ನು ಸೇವಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು ಈ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಅಧಿಕ ಮಂದಿಗೆ ಸೋಂಕು ಪತ್ತೆಯಾಗಿದ್ದು ಜನವರಿ 10ರಂದು ಸಾಮೂಹಿಕ ಆನೆಕಾಲು ನಿರೋಧಕ ಔಷಧಿಯನ್ನು ಕಾರ್ಯಕರ್ತರ ಮೂಲಕ ಮನೆ ಮನೆಗೆ ಭೇಟಿ ನೀಡಿ ನುಂಗಿಸಲಾಗುವುದು. ಜಿಲ್ಲೆಯ ಜನರ ಆರೋಗ್ಯಕ್ಕಾಗಿ ಸಾಮೂಹಿಕವಾಗಿ ಜರುಗುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಪಾಲುಗೊಂಡು ಯಶಸ್ಸು ಸಾಧಿಸೋಣ.