Wednesday, January 12, 2011

ಮಂಜನಾಡಿ ಮಾದರಿ ಗ್ರಾಮ ಪಂಚಾಯತ್

ವಾರ್ತಾ ವಿಶೇಷ:ಮಂಜನಾಡಿ ಮಾದರಿ ಗ್ರಾಮ ಪಂಚಾಯತ್
ಮಂಗಳೂರು, ಜನವರಿ 12:ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸಿಸುತ್ತಿರುವ ಮಂಜನಾಡಿ ಗ್ರಾಮ ಪಂಚಾಯತ್ ತನಗೆ ಮಂಜೂರಾದ ಎಲ್ಲಾ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಒಂದು ಮಾದರಿ ಗ್ರಾಮ ಪಂಚಾಯತ್ ಆಗಿದೆ.
ಸುಮಾರು 8,283 ಜನಸಂಖ್ಯೆಯನ್ನು ಹೊಂದಿರುವ ಮಂಜನಾಡಿ ಗ್ರಾಮಪಂಚಾಯತಿಯು 2008 ರಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪಡೆದಿತ್ತು. ಆಶ್ರಯ ಮನೆಗಳ ವಿತರಣೆಯಲ್ಲಿ ಕಳೆದ 2005-06 ರಿಂದ 2009-10 ರ ಸಾಲಿನಲ್ಲಿ ಒಟ್ಟು 32.60 ಲಕ್ಷ ರೂ.ಗಳನ್ನು ವೆಚ್ಚ ಮಾಡಿ 7 ಜನ ಪರಿಶಿಷ್ಟರಿಗೆ,75 ಜನ ಅಲ್ಪ ಸಂಖ್ಯಾತರಿಗೆ ಹಾಗ 20 ಜನ ಇತರೆ ಹಿಂದುಳಿದ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಮಾಡಲಾಗಿದೆ.
2009-10ನೇ ಸಾಲಿನಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ರೂ.6.00 ಲಕ್ಷ ಅನುದಾನ ಬಿಡುಗಡೆಯಾಗಿತ್ತು.ಇದರಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ಬಾವಿಕಟ್ಟೆ ಕಟ್ಟುವ ಕಾಮಗಾರಿ,ರಸ್ತೆ ಚರಂಡಿ,ಅಂಗಡಿ ಮಳಿಗೆ,ಕಾಲುದಾರಿ ಮುಂತಾದ 11 ಕಾಮಗಾರಿಗಳನ್ನು ಪೂರೈಸಲಾಗಿದೆ.
ಶೇಕಡಾ 25 ರ ಅನುದಾನದಿಂದ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿವಿಧ ಸೌಲಭ್ಯ ಒದಗಿಸಲು ರೂ.81.551 ನ್ನು 2008-09 ನೇ ಸಾಲಿನಲ್ಲಿ ಪಾವತಿಸಲಾಗಿದೆ.ಇದರಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಕಲಿಯಲು,ನರ್ಸಿಂಗ್ ತರಬೇತಿ ಹೊಂದಲು,ಶಿಕ್ಷಣ,ಟೈಲರಿಂಗ್ ತರಬೇತಿ,ಮನೆ ರಿಪೇರಿ ವೈದ್ಯಕೀಯ ಚಿಕಿತ್ಸೆ ಅಲ್ಲದೆ ಶವ ಸಂಸ್ಕಾರಕ್ಕೂ ಹಣ ನೀಡುವ ಮೂಲಕ ಪರಿಶಿಷ್ಟರ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ಮುಂದಾಗಿದೆ.13ನೇ ಹಣಕಾಸು ಯೋಜನೆಯನ್ವಯ 2010-11 ನೇ ಸಾಲಿನಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಮುಂಬರುವ ಬೇಸಿಗೆಯಲ್ಲಿ ಗ್ರಾಮಸ್ಥರಿಗೆ ನೀರಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ರೂ.74,200 ಕಾದಿರಿಸಲಾಗಿದೆ. ಇದರ ಜೊತೆಗೆ ನಾಟಿಕಲ್ ನಲ್ಲಿ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ,ಪಂಪ್ ಅಳವಡಿಸಲು ರೂ.25000/- ಕಾದಿರಿಸಲಾಗಿದೆ.
2010-11 ನೇ ಸಾಲಿನಲ್ಲಿ ಒಟ್ಟು ರೂ.6 ಲಕ್ಷ ಕ್ರಿಯಾ ಯೋಜನೆ ತಯಾರಿಸಲಾಗಿದ್ದು,ಇದರಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ,ಪೈಪ್ ಲೈನ್ ವಿಸ್ತರಣೆ,ಪರಿಶಿಷ್ಟರ ಮನೆಗಳಿಗೆ ವಿದ್ಯುತ್ ಸಂಪರ್ಕ,ಕಾಲುದಾರಿ ಅಭಿವೃದ್ಧಿ ಹೀಗೆ ಒಟ್ಟು 11 ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಹಾಗೂ ಮೆಸ್ಕಾಂನ ಬಾಕಿ ಬಿಲ್ಲು ರೂ.4.48 ಲಕ್ಷ ಪಾವತಿಸಲು ತೀರ್ಮಾನಿಸಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಸ್ಮಾಯಿಲ್ ದೊಡ್ಡಮನೆ ಹಾಗೂ ಉಪಾಧ್ಯಕ್ಯೆ ಸರೋಜಿನಿ ಇವರುಗಳ ಮಾರ್ಗದರ್ಶನದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.