Wednesday, January 5, 2011

ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಿಷೇಧ

ಮಂಗಳೂರು,ಜನವರಿ 05:ವೈದ್ಯಕೀಯ ಸಿಬ್ಬಂದಿ ಮೇಲೆ ಹಾಗೂ ವೈದ್ಯಕೀಯ ಸಂಸ್ಥೆಗಳ ಆಸ್ತಿಪಾಸ್ತಿಗೆ ಹಾನಿಯಂಟು ಮಾಡುವುದನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಪೂರ್ಣಕಾಲಿಕ, ಅರೆಕಾಲಿಕ ವೈದ್ಯಕೀಯ ಸಿಬ್ಬಂದಿ ವೈದ್ಯರು ,ಶ್ರುಶ್ರೂಷಕಿಯರು,ವೈದ್ಯ ವಿದ್ಯಾರ್ಥಿಗಳು,ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಿಂಸಾಚಾರ ನಡೆಸುವುದು ಅಥವಾ ನಡೆಸಲು ಯತ್ನಿಸುವುದನ್ನು ನಿಷೇಧಿಸಲಾಗಿದೆ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅಂತಹ ವ್ಯಕ್ತಿಗೆ 3 ವರ್ಷಗಳ ಕಾರಾಗೃಹ ಮತ್ತು 50,000 ರೂ ವರೆಗೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದು ಜಾಮೀನು ರಹಿತ ಅಪರಾಧ.ವೈದ್ಯೋಪಚಾರ ಸಂಸ್ಥೆಯ ಆಸ್ತಿಗೆ ಹಾನಿಯುಂಟು ಮಾಡಿದಲ್ಲಿ ಮೇಲೆ ತಿಳಿಸಿದ ಶಿಕ್ಷೆಗೆ ಗುರಿಯಾಗುವುದಲ್ಲದೆ,ನ್ಯಾಯಾಲಯವು ನಿರ್ಧರಿಸಿದಂತೆ ಆಸ್ತಿಗೆ ಉಂಟಾದ ನಷ್ಟದ ಖರೀದಿ ಬೆಲೆಯ 2 ರಷ್ಟು ಮೊತ್ತದ ದಂಡವನ್ನು ನೀಡಬೇಕಾಗುತ್ತದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ತಿಳಿಸಿರುತ್ತಾರೆ.