Wednesday, January 12, 2011

ಅನಧಿಕೃತ ಧಾರ್ಮಿಕ ನಿರ್ಮಾಣ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿ: ಜಿಲ್ಲಾಧಿಕಾರಿ

ಮಂಗಳೂರು, ಜನವರಿ.12: ಜಿಲ್ಲೆಯ ವಿವಿಧೆಡೆ ಅನಧಿಕೃತ ಧಾರ್ಮಿಕ ನಿರ್ಮಾಣಗಳ ತೆರವಿಗೆ ಸಂಬಂಧಿಸಿದ 64 ಪ್ರಕರಣಗಳಲ್ಲಿ 10 ನಿರ್ಮಾಣಗಳನ್ನು ಸ್ವಯಂ ಪ್ರೇರಿತವಾಗಿ ಸಂಬಂಧಪಟ್ಟವರು ತೆರವುಗೊಳಿಸಿದ್ದು, 24 ನಿರ್ಮಾಣ ತೆರವಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಅನರ್ಹವಿರುವ 6 ಪ್ರಕರಣಗಳನ್ನು ಶಿಫಾರಸ್ಸಿನ ಅನ್ವಯ ಕ್ರಮಕೈಗೊಳ್ಳಲು, ಉಳಿದ 24 ಪ್ರಕರಣಗಳ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ಅನಧಿಕೃತ ಧಾರ್ಮಿಕ ಕೇಂದ್ರಗಳ ಕಟ್ಟಡ ತೆರವು ಕಾರ್ಯಾ ಚರಣೆ ಸಭೆಯಲ್ಲಿ ತಿಳಿಸಿದರು.
ಸ್ವಯಂ ಪ್ರೇರಿತ ತೆರವಿಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ ದೊರಕದ ಹಿನ್ನಲೆಯಲ್ಲಿ ಈ ಸಂಬಂಧ ಮತ್ತೊಂದು ಸವಿವರ ಸುತ್ತೋಲೆಯನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದರು. ಈ ಸುತ್ತೋಲೆಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡಿ ಗುರಿ ನಿಗಧಿಪಡಿಸಲಾಗಿತ್ತು.ಈ ಪ್ರಕ್ರೀಯೆ ಬಳಿಕ 64 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಇಂದು ಸಭೆ ನಡೆಸಲಾಯಿತು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ರಸ್ತೆ, ಉದ್ಯಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ವಿವಿಧ ಧಾರ್ಮಿಕ ನಿರ್ಮಾಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿಗಳು ಬುಧವಾರ ಸಭೆ ನಡೆಸಿ ಈ ಮಾಹಿತಿ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕಾರ್ಯಾಚರಣೆ ಪ್ರಗತಿ ಬಗ್ಗೆ ಪ್ರತೀ ಬುಧವಾರ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು. ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರಲು ಎಲ್ಲ ಅಧಿಕಾರಿಗಳು ಶಕ್ತಿ ಮೀರಿ ಪ್ರಯತ್ನಿಸಬೇಕೆಂದರು. ತೆರವು ಕಾರ್ಯಾಚರಣೆ ಪೂರ್ವಭಾವಿಯಾಗಿ ವದಂತಿಗಳಿಗೆ ಯಾವುದೇ ಅವಕಾಶ ನೀಡದೆ ಕಾರ್ಯಾಚರಣೆಯನ್ನು ಮಾತೃ ಇಲಾಖೆಗಳೇ ನಡೆಸಬೇಕು. ಅವರಿಗೆ ಕಾನೂನು ಸುವ್ಯವಸ್ಥೆ ಪಾಲನೆಗೆ ತಾಲೂಕು ದಂಡಾಧಿಕಾರಿಗಳಾದ ತಹಸೀಲ್ದಾರರು ಮತ್ತು ಪೊಲೀಸರು ನೆರವು ನೀಡುವರು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನೋಟೀಸು ಜಾರಿ:
ಸಭೆಯಲ್ಲಿ ಉಪಸ್ಥಿತರಿರದೆ ಮುಲ್ಕಿ ಸಮೀಪದ ಆರಾಧನಾ ಕ್ಷೇತ್ರವೊಂದರ ಬಗ್ಗೆ ಸೂಕ್ತ ಮಾಹಿತಿ ನೀಡಲು ವಿಫಲರಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನೋಟೀಸು ಜಾರಿ ಮಾಡಿ 48 ಗಂಟೆಯೊಳಗೆ ಉತ್ತರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಮಂಗಳೂರು, ಪುತ್ತೂರು ಸಹಾಯಕ ಆಯುಕ್ತರು, ಎಲ್ಲ ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಮೂಡಾ ಆಯುಕ್ತ ಮಧುಕರ್ ಗಡ್ಕರ್ ಉಪಸ್ಥಿತರಿದ್ದರು.