Friday, November 12, 2010

ಪರವಾನಿಗೆ ಇಲ್ಲದೆ ಉದ್ಯಮ ನಡೆಸಲು ಮಹಾನಗರಪಾಲಿಕೆಯಲ್ಲಿ ಅವಕಾಶವಿಲ್ಲ: ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್ 12: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಇಲ್ಲದೆ ವ್ಯಾಪಾರ ವ್ಯವಹಾರ ನಡೆಸಲು ಯಾರಿಗೂ ಅವಕಾಶವಿಲ್ಲ; ಈ ಬಗ್ಗೆ ಪಾಲಿಕೆ ಆಡಳಿತಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಎಚ್ಚರಿಕೆ ನೀಡಿದ್ದಾರೆ.

ಇಂದು ಅಪರಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಮಹಾನಗರಪಾಲಿಕೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಹಾನಗರಪಾಲಿಕೆ ಅಭಿವೃದ್ಧಿ ಪರಿಶೀಲಿಸುತ್ತಿದ್ದರು. ಪರವಾನಿಗೆ ಇಲ್ಲದೆ ಉದ್ಯಮ ನಡೆಸುತ್ತಿರುವ ಬಗ್ಗೆ, ಪರವಾನಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ವರದಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಹಂತ ಹಂತವಾಗಿ ವ್ಯವಸ್ಥೆಯನ್ನು ಉತ್ತಮ ಪಡಿಸುವ ಬಗ್ಗೆ ಅಧಿಕಾರಿಗಳಿಗೆ ಕನಿಷ್ಠ ಬದ್ದತೆ ಬೇಕು. ಇಲ್ಲದಿದ್ದರೆ ವ್ಯವಸ್ಥೆ ಕುಸಿಯಲಿದೆ ಎಂದರು. ಲೈಸನ್ಸ್ ವ್ಯವಸ್ಥೆ ಬಗ್ಗೆ ಆತ್ಮ ಮಂಥನ ಮಾಡಿ ಏನು ಕ್ರಮ ಕೈ ಗೊಳ್ಳ ಬಹುದೆಂಬ ಬಗ್ಗೆ ತಕ್ಷಣವೇ ಹೇಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇಂತಹ ಬೇಜವಾಬ್ದಾರಿ ವರ್ತನೆಯನ್ನು ಸಹಿಸುವುದಿಲ್ಲ ಎಂದ ಜಿಲ್ಲಾಧಿಕಾರಿಗಳು, ವ್ಯವಸ್ಥೆಯಲ್ಲಿ ಸುಧಾರಣೆ ತರಲು ಒಂದು ತಿಂಗಳು ಕಾಲಾವಕಾಶ ನೀಡಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್, ಮೂಡಾ ಆಯುಕ್ತ ಮಧುಕರ ಗಡ್ಕರ್, ಕಂದಾಯ ಅಧಿಕಾರಿ ಮೇಘನಾ ಸೇರಿದಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.