Thursday, November 4, 2010

ಭಾಗ್ಯಲಕ್ಷ್ಮಿ : ಪೂರ್ವಭಾವಿ ಸಭೆ

ಮಂಗಳೂರು,ನವೆಂಬರ್ 04: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ ಆವರಣದಲ್ಲಿ ನವೆಂಬರ್ 16 ರಂದು ಆಯೋಜಿಸಲಾಗಿರುವ ಭಾಗ್ಯಲಕ್ಷ್ಮಿ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಆಗಮಿಸಲಿದ್ದು, ಸಮಾರಂಭದ ಪೂರ್ವ ತಯಾರಿ ಬಗ್ಗೆ ಜಿಲ್ಲಾಧಿಕಾರಿ ಸುಬೋದ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಮಾ ರಂಭದಲ್ಲಿ 11,987 ಭಾಗ್ಯಲಕ್ಷ್ಮಿ ಫಲಾನು ಭವಿಗಳು ಭಾಗವಹಿ ಸಲಿದ್ದು, ಅವರನ್ನು ಸಮಾರಂಭ ಸ್ಥಳಕ್ಕೆ ಕರೆತರಲು 240 ಕೆ ಎಸ್ ಆರ್ ಟಿ ಸಿ ಬಸ್ ಗಳು, ಹಸು ಗೂಸುಗಳೊಂದಿಗೆ ಆಗಮಿಸಿದ ಅಮ್ಮಂದಿರಿಗೆ ಯಾವುದೇ ತೊಂದರೆ ಯಾಗದಂತೆ ವ್ಯವಸ್ಥೆ ಏರ್ಪಡಿಸಲು 5 ಬೃಹತ್ ಕೌಂಟರ್ ಗಳು, ಅವರಿಗೆ ಕುಳಿತು ಕೊಳ್ಳಲು, ಮಕ್ಕಳಿಗೆ ಹಾಲು ಅಮ್ಮಂದಿರಿಗೆ ಲಘು ಉಪಹಾರದ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮ ಗಳನ್ನು ಯಾವುದೇ ಗೊಂದಲಕ್ಕೆಡೆಯಾಗದಂತೆ ರೂಪಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಸಹಾಯಕ ಆಯುಕ್ತರಾದ ಡಾ. ಹರೀಶ್ ಕುಮಾರ್, ಮಂಜುನಾಥ ಪೂಜಾರಿ ಇವರು ಸಭೆಗೆ ಮಾಹಿತಿ ನೀಡಿದರು.
ಎಲ್ಲ ವ್ಯವಸ್ಥೆಗಳನ್ನು ಪಾರದರ್ಶಕವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಆಹ್ವಾನ ಪತ್ರಿಕೆ, ಬಸ್ ವ್ಯವಸ್ಥೆ, ಆರೋಗ್ಯ ತಪಾಸಣೆ, ಫಲಾನುಭವಿಗಳಿಗೆ ಬಾಗೀನ ವಿತರಣೆ, ಆಹ್ವಾನ ಪತ್ರಿಕೆ, ಪ್ರಚಾರಕ್ಕೆ ಪ್ರತ್ಯೇಕ ಉಪಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಸಿಇಒ ಪಿ. ಶಿವಶಂಕರ್, ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ರಮೇಶ್, ಎಎಸ್ ಪಿ ಪ್ರಭಾಕರ, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಂಗಪ್ಪ, ಆರ್ ಟಿ ಒ ಸೇವಾನಾಯಕ್, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.