Friday, November 26, 2010

ಅಂಗವಿಕಲರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ: ಕೆ.ವಿ. ರಾಜಣ್ಣ

ಮಂಗಳೂರು,ನವೆಂಬರ್ 26:ಗ್ರಾಮ ಪಂಚಾಯತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಲು, ಅವರಿಗೆ ಎಲ್ಲ ಇಲಾಖೆಗಳಲ್ಲೂ ನೀಡಿರುವ ಮೀಸಲಾತಿಯನ್ನು ಪರಿಶೀಲಿಸಿ, ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಪ್ರತ್ಯೇಕ ಸಚಿವಾಲಯ ರೂಪಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರಾದ ಕೆ. ವಿ. ರಾಜಣ್ಣ ತಿಳಿಸಿದರು.ಅವರಿಂದು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾ ಗೋಷ್ಠಿ ಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ಜನವರಿ ಯಲ್ಲಿ ನಡೆಯ ಲಿರುವ ಜನ ಗಣತಿ ಯಲ್ಲಿ ಅಂಗವಿಕಲರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಣೆಗೆ ಸೂಚಿಸಿರುವ ಆಯುಕ್ತರು, ಯಾರಿಗೂ ಅಂಗವಿಕಲರ ಬಗ್ಗೆ, ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯೇ ಇಲ್ಲದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಎಂಡೋಸಲ್ಫಾನ್ ನಿಂದ ಅಂಗವೈಕಲ್ಯ ಹೊಂದಿದವರ ಬಗ್ಗೆಯೂ ಪ್ರತ್ಯೇಕ ವರದಿ ತಯಾರಿಸಲಾಗುವುದು ಎಂದರು. ಬುದ್ಧಿ ಮಾಂದ್ಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಒದಗಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯಡಿ ಈಗಾಗಲೇ ನೇಮಕ ಮಾಡಲಾಗಿದೆ. ಪಟ್ಟಣ ಪಂಚಾಯಿತಿಯಿಂದ ಪಂಚಾಯತ್ ರಾಜ್ ಸಂಸ್ಥೆಗಳ ಇಲಾಖೆ ಮಟ್ಟದವರೆಗೆ ಅಂದರೆ ನಗರಾಭಿವೃದ್ಧಿ ಪೌರಾಡಳಿತ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಎಲ್ಲಾ ಇಲಾಖೆಗಳು ಪ್ರತಿಶತ ಶೇ.3 ರಷ್ಟು ಅಯವ್ಯಯವನ್ನು ಅಂಗವಿಕಲರಿಗಾಗಿ ಅಧಿ ನಿಯಮದನ್ವಯ ಮೀಸಲಿಡಬೇಕಿದೆ. ಈ ಸಂಬಂಧ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನ ಗೊಳಿಸಬೇಕಿದೆ ಎಂದರು.ಅಂಗವಿಕಲರು 2011ರಲ್ಲಿ ನಡೆಸಲಾಗುವ ಸರ್ವೇ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಎಲ್ಲ ಮಾಹಿತಿಯನ್ನು ನೀಡಲು ಒತ್ತಾಯಿಸಿದರು. ಅಂಗವಿಕಲರ ಸಂಖ್ಯೆಯನ್ನಾಧರಿಸಿ ಅವರಿಗೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರಿಂದ ಮಾಹಿತಿಯ ಅಗತ್ಯವನ್ನು ಪ್ರತಿಪಾದಿಸಿದರು.ಜಿಲ್ಲೆಯಲ್ಲಿ ಅಂಗವಿಕಲರ ಜನಸಂಖ್ಯೆ 17155 ಇದ್ದು, 15,905 ಜನರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಇತರರಿಗೆ ಕೂಡಲೇ ಗುರುತಿನ /ಅಂಗವಿಕಲತೆ ಪ್ರಮಾಣ ಪತ್ರವನ್ನು ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಂಗವಿಕಲ ಮಕ್ಕಳ ಸಮನ್ವಯ ಶಿಕ್ಷಣ ಅಂಗನವಾಡಿಯಿಂದಲೇ ಪ್ರಾರಂಭವಾಗಬೇಕು. ಇಂತಹ ಮಕ್ಕಳನ್ನು ಮುಖ್ಯವಾಹಿನಿಯಲ್ಲಿ ತರಲು ಸಾಮಾನ್ಯ ಶಾಲೆಗಳಲ್ಲಿ ಸಮನ್ವಯ ಶಿಕ್ಷಣ ನೀಡುವುದು ಅಗತ್ಯವಿದ್ದು, ಎಲ್ಲ ಶಾಲೆಗಳಲ್ಲೂ ಇಂತಹ ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಅಂಗವಿಕಲರ ಅಧಿನಿಯಮ ದಲ್ಲಿ ಅಂಗವಿಕಲ ಮಕ್ಕಳಿಗೆ ಉನ್ನತಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ದಾಖಲಾತಿಯಲ್ಲಿ ಶೇ. 3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದೇ ರೀತಿ ವಸತಿನಿಲಯಗಳಲ್ಲೂ ಸಹ ಅಂಗವಿಕಲ ಮಕ್ಕಳಿಗೆ ಪ್ರಾಧಾನ್ಯತೆ ನೀಡಬೇಕೆಂದರು.
ಪ್ರತಿ ಜಿಲ್ಲೆಗಳಲ್ಲಿ ಅಂಗವಿಕಲರ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು ಮತ್ತು ಶೇ. 3ರ ಅನುದಾನದಲ್ಲಿ ಅದನ್ನು ನಡೆಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಈ ಕೇಂದ್ರಗಳಲ್ಲಿ ಅಂಗವಿಕಲರ ತಪಾಸಣೆ, ಸಾಧನ ಸಲಕರಣೆ ತಯಾರಿಕೆ/ ವಿತರಣೆ, ಅಂಗವಿಕಲರಿಗೆ ಬೇಕಾಗುವ ಮಾಹಿತಿ ಒದಗಿಸಬೇಕು. ಜಿಲ್ಲಾಧಿಕಾರಿಗಳಲ್ಲಿ ಅಂಗವಿಕಲರು ತಮ್ಮ ಕುಂದುಕೊರತೆಯ ಬಗ್ಗೆ ಅರ್ಜಿ ಸಲ್ಲಿಸಿ ನಿವಾರಿಸಿಕೊಳ್ಳಬಹುದು ಎಂದೂ ಹೇಳಿದರು.ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಖಡ್ಡಾಯ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ರಾಜ್ಯ ಮಟ್ಟದ ಹಾಗೂ ರಾಜ್ಯ ನೀತಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ರಾಜ್ಯ ಆಯುಕ್ತರು ಬೆಂಗಳೂರು ಇವರಿಗೆ ಸಲ್ಲಿಸಬಹುದೆಂದು ರಾಜ್ಯ ಆಯುಕ್ತರುತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಳಾ, ಸಹಾಯಕ ಆಯುಕ್ತ ಇಬ್ರಾಹಿಂ ಗೂನಡ್ಕ, ಅಂಗವಿಕಲ ಕಲ್ಯಾಣಾಧಿಕಾರಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.