Wednesday, November 3, 2010

ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೆ ಸಾರ್ವಜನಿಕರ ಸಹಕಾರ ಅಗತ್ಯ-ಜಿಲ್ಲಾಧಿಕಾರಿ

ಮಂಗಳೂರು ನವೆಂಬರ್ 03:ಜನಪರವಾಗಿ ಸುಪ್ರೀಂ ಕೋರ್ಟ್ ತೆಗೆದುಕೊಂಡಿರುವ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಆದೇಶದಲ್ಲಿ ಜನಹಿತ ಅಡಗಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಅನುಷ್ಠಾನಕ್ಕೆ ತರಲು ಜನರು ಸಂಪೂರ್ಣ ಸಹಕಾರ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಭೋಧ್ ಯಾದವ್ ಹೇಳಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಜನಹಿತ ಬಯಸಿ ಕೆಲಸ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಬೇಕು. ಜನಪರ ವಾಗಿರುವ ಕಾರ್ಯಾಚರಣೆಯನ್ನು ಮಾಹಿತಿ ನೀಡುವ ಮೂಲಕ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಹಾಗಾದಾಗ ಯಾವುದೇ ಅನಪೇಕ್ಷಿತ ಘಟನೆಗಳು ಸಂಭವಿಸುವುದಿಲ್ಲ ಎಂಬುದು ತಮ್ಮ ಅನುಭವ ಎಂಬುದನ್ನು ಸಭೆಯಲ್ಲಿ ವಿವರಿಸಿದರು. ಪ್ರತಿಯೊಂದು ತಾಲೂಕುಗಳಲ್ಲಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಮಾಹಿತಿ ಅದರಲ್ಲೂ ಮುಖ್ಯವಾಗಿ ರಸ್ತೆಗಳನ್ನು ಅತಿಕ್ರಮಿಸಿ ನಿರ್ಮಾಣಗೊಂಡ ಕಟ್ಟಡಗಳ ತೆರವನ್ನು ಪ್ರಥಮ ಹಂತದಲ್ಲಿ ಕೈಗೊಳ್ಳುವ ಬಗ್ಗೆ ಸ್ಪಷ್ಟ ಹಾಗೂ ಸವಿವರ ಮಾರ್ಗದರ್ಶನವನ್ನು ಅಧಿಕಾರಿಗಳಿಗೆ ನೀಡಿದರು.
ಅತಿಕ್ರಮಣದಿಂದ ಸಾರ್ವಜನಿಕರಿಗಾಗುವ ಅನಾನುಕೂಲತೆಗಳ ಬಗ್ಗೆ ಜನಾಭಿಪ್ರಾಯ ಮೂಡಿದಾಗ ಅತಿಕ್ರಮಣ ತೆರವು ಕಾರ್ಯಾಚರಣೆ ಸುಲಭ ಎಂದ ಅವರು, ದ.ಕ. ಜಿಲ್ಲೆಯಲ್ಲಿ ಅಂತಹ ಉತ್ತಮ ವಾತಾವರಣ ಈಗಾಗಲೇ ನಿರ್ಮಾಣ ಗೊಂಡಿದೆ. ಸರ್ವೋಚ್ಚ ನ್ಯಾಯಾಲಯವು ಜನಹಿತವನ್ನು ಗಮನದಲ್ಲಿರಿಸಿ ಈ ಆದೇಶ ಹೊರಡಿಸಿದೆ ಎಂಬುದನ್ನು ತಾಲೂಕು ಮತ್ತು ವಿಭಾಗ ಮಟ್ಟದ ಅಧಿಕಾರಿಗಳು ಧಾರ್ಮಿಕ ಮುಖಂಡರ ಸಭೆ ಕರೆದು ಮನವೊಲಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿದರೆ ಜನರ ಬೆಂಬಲ ಖಂಡಿತಾ ಇರುತ್ತದೆ ಎಂಬ ನಂಬುಗೆ ವ್ಯಕ್ತಪಡಿಸಿದರು.
ಸಾರ್ವಜನಿಕರ ಅನುಕೂಲವೆಂಬ ಒಂದೇ ಹಿತದೃಷ್ಠಿಯನ್ನಿರಿಸಿ ನಾವು ಕಾರ್ಯೋನ್ಮುಖವಾದರೆ ಜನರೇ ಅತಿಕ್ರಮಣ ತೆರವುಗೊಳಿಸಲು ನೆರವಾಗುವರು. ಚಿಕ್ಕಬಳ್ಳಾಪುರದಲ್ಲಿ ಅತಿಕ್ರಮಣ ತೆರವಿಗೆ ಜನತೆ ಸಹಕಾರ ನೀಡಿರುವ ರೀತಿಯನ್ನು ಸ್ಮರಿಸಿದ ಅವರು, ಇಲ್ಲೂ ಅದೇ ಮಾದರಿಯನ್ನು ಅಗತ್ಯವಿದ್ದಲ್ಲಿ ಅಳವಡಿಸಿಕೊಳ್ಳಬಹುದೆಂದು ಸಲಹೆಯನ್ನು ನೀಡಿದರು. ಅತಿಕ್ರಮಿತ ಜಮೀನು ಯಾವ ಇಲಾಖೆಯಡಿ ಬರುತ್ತದೋ ಅದೇ ಇಲಾಖೆಗಳು ನೋಟೀಸು, ನೀಡಿ ಕಾರ್ಯಾಚರಣೆ ನಡೆಸಲು ಜವಾಬ್ದಾರಿ ನಿಗದಿ ಪಡಿಸಿ. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಜನರ ಸಹಕಾರವನ್ನು ತಾವು ನಿರೀಕ್ಷಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಮಂಗಳೂರು, ಪುತ್ತೂರು ಎಸಿ, ತಹಸೀಲ್ದಾರ್ ಗಳು ಉಪಸ್ಥಿತರಿದ್ದರು ಪೂರಕ ಮಾಹಿತಿ ನೀಡಿದರು.