Tuesday, November 16, 2010

11,987 ತಾಯಂದಿರಿಗೆ ಮುಖ್ಯಮಂತ್ರಿಗಳಿಂದ ಬಾಂಡ್, ಸೀರೆ ವಿತರಣೆ

ಮಂಗಳೂರು ನವೆಂಬರ್16:ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ ಜನಪ್ರಿಯ ಭಾಗ್ಯಲಕ್ಷ್ಮಿ ಯೋಜನೆ ಇಡೀ ದೇಶದಲ್ಲೇ ಪ್ರಶಂಸೆಗೆ ಪಾತ್ರವಾಗಿದ್ದು, ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿ ಮಕ್ಕಳ 11987 ತಾಯಂದಿರಿಗೆ ನವೆಂಬರ್ 17 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ವಿತರಿಸಲಿದ್ದಾರೆಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು,ಜಲಸಾರಿಗೆ ಹಾಗೂ ಮೀನುಗಾರಿಕೆ ಖಾತೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೇಮಾರ್ರವರು ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ನಾಳಿನ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು.
ದ.ಕ.ಜಿಲ್ಲೆಯಲ್ಲಿ 2010 ರ ಸೆಪ್ಟೆಂಬರ್ ಅಂತ್ಯದ ವರೆಗೆ 12983 ಹೆಣ್ಣು ಮಕ್ಕಳುಈ ಯೋಜನೆಯಡಿ ಸೇರ್ಪಡೆಗೊಂಡಿದ್ದು, 9138 ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದ್ದು,ಇಲ್ಲಿಯ ವರೆಗೆ ಇದಕ್ಕಾಗಿ 223.56 ಲಕ್ಷ ರೂ.ಗಳನ್ನು ಠೇವಣಿ ಇಡಲಾಗಿದೆ. ಇದಲ್ಲದೆ ಇನ್ನು 3845 ಮಕ್ಕಳಿಗೆ ಈ ಯೋಜನೆಯಲ್ಲಿ ಬಾಂಡ್ ವಿತರಿಸಲಾಗುವುದೆಂದು ಸಚಿವರು ತಿಳಿಸಿದರು. ಭಾಗ್ಯ ಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ದ.ಕ.ಜಿಲ್ಲೆಯಾದ್ಯಂತ ಒಟ್ಟು 232 ಬಸ್ಸುಗಳ ಮೂಲಕ ಫಲಾನುಭವಿ ಮಕ್ಕಳು ಹಾಗೂ ತಾಯಂದಿರನ್ನು ಕರೆತರಲು ಅವಕಾಶ ಕಲ್ಪಿಸಲಾಗಿದ್ದು, ಕಾರ್ಯ ಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಸ್ತ್ರೀಶಕ್ತಿ ಯೋಜನೆಯಡಿ ಮಹಿಳಾ ಗುಂಪುಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾ ಮಟ್ಟದಲ್ಲಿ ಮಾರುಕಟ್ಟೆ ಸಂಕೀರ್ಣ/ಮಳಿಗೆಯನ್ನು ರೂ.65 ಲಕ್ಷ ವೆಚ್ಚದಲ್ಲಿ ಮಂಗಳೂರಿನ ಬಿಜೈ ಸಮೀಪ ನಿರ್ಮಿಸಲಾಗುವುದು.ಇದಕ್ಕೆ ತಮ್ಮ ಶಾಸಕರ ನಿಧಿಯಿಂದ ರೂ.10 ಲಕ್ಷ ಅನುದಾನ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲ್ಲಿ ಹಾಜರಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಯೋಗೀಶ್ ಭಟ್ ಅವರು ರೂ.5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು. ಮಂಗಳೂರು ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಅನುವು ಆಗುವಂತೆ ಸಂಚಾರ ನಿಯಂತ್ರಣ ಸಾಧನೆಗಳನ್ನು ಅಳವಡಿಸಲು ಪೊಲೀಸ್ ಇಲಾಖೆಗೆ ರೂ.7 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು ಶೀಘ್ರದಲ್ಲೇ ನಗರದಲ್ಲಿ ಸುಗಮ ಸಂಚಾರಕ್ಕೆ ನಾಂದಿಯಾಗಲಿದೆಯೆಂದರು. ಇದರ ಜೊತೆಗೆ ಮಂಗಳೂರು ನಗರದ ರಸ್ತೆಗಳನ್ನು 7 ತಿಂಗಳೊಳಗಾಗಿ ಸುಸಜ್ಜಿತಗೊಳಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.