Monday, November 22, 2010

199 ಅರಣ್ಯ ಹಕ್ಕು ಪತ್ರಗಳನ್ನು ಇಂದೇ ಅಂತಿಮಗೊಳಿಸಿ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ನವೆಂಬರ್ 22: ಹಲವಾರು ವರ್ಷಗಳಿಂದ ಅರಣ್ಯದಲ್ಲಿ ನೆಲೆನಿಂತ ಕುಟುಂಬಗಳ ಬದುಕಿಗೆ ಭದ್ರತೆ ನೀಡಲು ಸರ್ಕಾರ ರೂಪಿಸಿದ ವಿಶೇಷ ಕಾಯಿದೆ ಅರಣ್ಯ ಹಕ್ಕು ಪತ್ರ ನೀಡಿಕೆಯಾಗಿದ್ದು, ಈ ಕಾಯಿದೆಯ ಉದ್ದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಥೈಸಿಕೊಂಡು ಶೀಘ್ರ ಅನುಷ್ಠಾನಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಅರಣ್ಯ ಹಕ್ಕು ಪತ್ರಗಳ ನೀಡಿಕೆ ಕುರಿತ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
262 ಹಕ್ಕುಪತ್ರಗಳನ್ನು ಮಾನ್ಯತೆಗಾಗಿ ಸಲ್ಲಿಸಿದ್ದು, 32 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. 230 ಅರ್ಜಿಗಳು ಬಾಕಿ ಇದ್ದು,ಅವುಗಳಲ್ಲಿ 63ನ್ನು ಬಫರ್ ಎಂದು ನಮೂದಿಸಲಾಗಿದೆ. 199 ಹಕ್ಕು ಪತ್ರಗಳಲ್ಲಿ ಅರಣ್ಯ ಪ್ರದೇಶ ಎಂದು ನಮೂದಿಸಿದ್ದು, ಇಂದು ಸಮಿತಿ ಸದಸ್ಯರು ಕುಳಿತು ಈ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯವಾಸಿಗಳ ಬದುಕಿನ ಭದ್ರತೆಗೆ ರೂಪಿಸಿದ ಈ ಕಾಯಿದೆಯನ್ನು ಹಗುರವಾಗಿ ಪರಿಗಣಿಸದೆ, ಸಂಶಯಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ತುರ್ತಾಗಿ ಸಂಪರ್ಕಿಸಿ, ಸಮಜಾಯಿಷಿ ಪಡೆದುಕೊಂಡು ಈ ವಿಷಯದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕೆಂದರು. ಬಫರ್ ಜಮೀನಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ತಾವೇ ಮಾತನಾಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು, ವಿಶೇಷ ಕಾಯಿದೆಯ ಮೂಲ ಉದ್ದೇಶ ಈಡೇರಬೇಕೆಂದರು.ಈ ಸಂಬಂಧ ಸಭೆಯಲ್ಲೇ ಒಂದು ಮಾದರಿಯನ್ನು ತಯಾರಿಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಸಾಮಾಜಿಕ ಕಲ್ಯಾಣ ಇಲಾಖೆ ಅಧಿಕಾರಿಗಳ ನೆರವನ್ನು ಈ ಸಂಧರ್ಭದಲ್ಲಿ ಪಡೆಯಲು ಸೂಚಿಸಿದರು. ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್, ಡಿಸಿಎಫ್ ವಿಜಯಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದರು.