Thursday, November 11, 2010

ಪ್ರಾಕೃತಿಕ ವಿಕೋಪ, ಶಾಸಕ, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಕಾಲಮಿತಿ ನಿಗದಿ

ಮಂಗಳೂರು, ನವೆಂಬರ್ 11: 2006-08ರ ಸಾಲಿನ ಪ್ರಾಕೃತಿಕ ವಿಕೋಪ, ಶಾಸಕ, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಡಿಸೆಂಬರ್ 31 2010 ಅಂತಿಮ ದಿನವೆಂದು ನಿಗದಿಪಡಿಸಿದ್ದು, ಈ ಸಾಲಿನ ಕಾಮಗಾರಿಗಳ ಬಗ್ಗೆ ಮತ್ತೆ ಪ್ರಸ್ತಾಪವೇ ಸಲ್ಲದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸ್ಪಷ್ಟಪಡಿಸಿದರು.

ಅವರಿಂದು ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಪ್ರಾಕೃತಿಕ ವಿಕೋಪ ನಿಧಿ, ಶಾಸಕರ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುಷ್ಠಾನಕ್ಕೆ ಸಂಬಂಧಿ ಸಿದಂತೆ ಕರೆದ ವಿವಿಧ ಇಲಾಖಾ ಧಿಕಾರಿಗಳ ಸಭೆಯಲ್ಲಿ ಎಲ್ಲ ಕಾಮಗಾರಿ ಗಳನ್ನು ಸಮಯ ಮಿತಿಯಡಿ ಮುಗಿಸಲು ಸಂಬಂಧ ಪಟ್ಟ ಇಲಾಖಾ ಧಿಕಾರಿಗಳಿಗೆ ಸೂಚನೆ ನೀಡಿದರು. 2009-10ನೇ ಸಾಲಿನ ಕಾಮಗಾರಿ ಮುಗಿಸಲು 2011 ಜನವರಿ 31ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸಭೆಯಲ್ಲಿ ಸಕಾರಣ ನೀಡಿದ ಕೆಲವು ಕಾಮಗಾರಿಗಳಿಗೆ ಮಾತ್ರ ವಿಸ್ತರಣೆಗೆ ಅವಕಾಶ ನೀಡಲಾಯಿತು.
ಪ್ರಾಕೃತಿಕ ವಿಕೋಪ ಕಾಮಗಾರಿ ತುರ್ತಾಗಿ ನಡೆಯಬೇಕಾಗಿದ್ದ ಕಾಮಗಾರಿಯಾಗಿದ್ದು, ಈ ಕಾಮಗಾರಿಗಳ ಅನುಷ್ಠಾನಕ್ಕೆ ವರ್ಷಾನುಗಟ್ಟಲೆ ಸಮಯ ವ್ಯಯಿಸಿದರೆ ಯೋಜನೆ ಉದ್ದೇಶವೇ ನಿರರ್ಥಕವೆಂಬುದನ್ನು ವಿವರಿಸಿದ ಜಿಲ್ಲಾಧಿಕಾರಿಗಳು, ಕಾಲಮಿತಿಯೊಳಗೆ ಜನರಿಗೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಿ; ಯೋಜನೆಗಳನ್ನು ರೂಪಿಸಲು ಬೇಡಿಕೆ ಸಲ್ಲಿಸುವಾಗಲೇ ಸಂಬಂಧಪಟ್ವವರಿಗೆ ಯೋಜನೆ, ಕಾಮಗಾರಿಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಲು ಅಧಿಕಾರಿಗಳಲ್ಲಿ ಹಿಂಜರಿಕೆ ಬೇಡ. ಇದರಿಂದ ಯೋಜನೆಯ ಅನುಷ್ಠಾನದಲ್ಲಿ ಅಸಮರ್ಪಕತೆ ನಿವಾರಣೆ ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಕ್ರಮವಾಗಿ ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಹಾಗೂ ಮಹಾನಗರಪಾಲಿಕೆ ಕಾಮಗಾರಿಗಳ ವಿವರವನ್ನು 2005-06ರಿಂದ 09-10 ರವರೆಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಹಲವು ಸಂದರ್ಭಗಳಲ್ಲಿ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇರುವ ಬಗ್ಗೆ ಎಚ್ಚರಿಕೆ ನೀಡಿದರು. ಶಾಸಕರ ಅನುದಾನ ತಾಲೂಕುವಾರು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ವ್ಯವಸ್ಥಿತವಾಗಿ ಎಲ್ಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಕೆಲಸ ಅಪೂರ್ಣ, ಪ್ರಗತಿಯಲ್ಲಿದೆ ಎಂಬುದನ್ನು ತೋರಿಸದೆ, ಪೂರ್ಣಗೊಂಡಿದೆ, ಸಕಾರಣದಿಂದ ಕೈಬಿಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಿ. ಸಮಸ್ಯೆಗಳಿದ್ದರೆ ನೇರವಾಗಿ ತಮ್ಮ ಗಮನಕ್ಕೆ ತರಲು ಸೂಚಿಸಿದರು.
ಕಾಮಗಾರಿಯ ಗುಣಮಟ್ಟದ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿದ್ದ ಮಾನದಂಡವನ್ನೇ ಮುಂದುವರಿಸುವುದಾಗಿ ಹೇಳಿದ ಸುಬೋಧ್ ಯಾದವ್ ಅವರು, ಕಾಮಗಾರಿಯ ಪ್ರತ್ಯಕ್ಷ ವೀಕ್ಷಣೆ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದರು. ಇಲಾಖೆಗಳು ಹೊಣೆಯರಿತು ಸಮಯಮಿತಿಯೊಳಗೆ ಕೆಲಸ ಮಾಡುವುದರಿಂದ ಎಲ್ಲರಿಗೂ ಅನುಕೂಲ ಎಂದು ನುಡಿದರು.