Wednesday, November 10, 2010

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರಾವಳಿ ನಿಯಂತ್ರಣ ವಲಯ ಸಭೆ

ಮಂಗಳೂರು, ನವೆಂಬರ್. 10: ಕರಾವಳಿ ನಿಯಂತ್ರಣ ಅಧಿಸೂಚನೆ 1991ರ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಗಮನಾರ್ಹವಾಗಿದ್ದನ್ನು ಪರಿಗಣಿಸಿ ಕೇಂದ್ರ ಸರಕಾರ 2010 ಸೆಪ್ಟೆಂಬರ್ 15ರಂದು ಹೊಸ ಕರಡು ಅಧಿಸೂಚನೆ ಸಿದ್ಧಪಡಿಸಿದೆ. ಈ ಕರಡು ಅಧಿಸೂಚನೆ ಲೋಪದೋಷಗಳ ಬಗ್ಗೆ ನವೆಂಬರ್ 15ರೊಳಗೆ ವರದಿ ಸಲ್ಲಿಸಬೇಕಿದ್ದು, ಈ ನಿಟ್ಟಿನಲ್ಲಿ ವಿವಿಧ ಮಟ್ಟಗಳಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ಇಂದು ಈ ಸಂಬಂಧ ಜಿಲ್ಲಾ ಉಸ್ತು ವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಜನ ಪ್ರತಿನಿಧಿ ಗಳನ್ನೊಳ ಗೊಂಡ ಸಭೆ ನಡೆಯಿತು.
ಸಿ ಆರ್ ಝಡ್ ನ ಅಧಿಕಾರಿ ಮಹೇಶ್ ಕುಮಾರ್ ಅವರು ಪಿಪಿಟಿ ಪ್ರಸಂಟೇಷನ್ ಮುಖಾಂತರ ಸಿ ಆರ್ ಝಡ್ ಒಂದರಿಂದ ಐದರವರೆಗಿನ ಕರಡು ಅಧಿ ಸೂಚನೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕರಡು ಅಧಿ ಸೂಚನೆಯಂತೆ ನದಿಯ/ ಸಮುದ್ರದ ಇಳಿತ ರೇಖೆಯ ಕಡೆಗಿನ ಭೂಭಾಗ ಕರಾವಳಿ ನಿಯಂತ್ರಣ ವಲಯಕ್ಕೆ ಸೇರಿದೆ. ಆದರೆ ಇದರಿಂದಾಗಿ ನದಿಯಲ್ಲಿ ಮರಳು ಗಾರಿಕೆಗೆ ತೊಂದರೆ ಯಾಗಲಿದ್ದು, ಈ ವ್ಯಾಪ್ತಿಯಲ್ಲಿ ಸುಸ್ಥಿರ ಮರಳು ಗಾರಿಕೆಗೆ ಅವಕಾಶ ನೀಡಬೇಕು. ನಗರದ ಹೊರ ವಲಯದ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಹಾಗೂ ಕರಾವಳಿ ಯಲ್ಲಿರುವ ಮೀನುಗಾರರಿಗೆ ಮನೆ ನಿರ್ಮಿಸಲು ಅನುಕೂಲವಾಗುವಂತೆ ನಗರಮಿತಿಯ ಹೊರಗಿರುವ ಪ್ರದೇಶಗಳಲ್ಲಿಯೂ ವಾಸ್ತವ್ಯ ಹೆಚ್ಚಿರುವ ಪ್ರದೇಶಗಳನ್ನು ಸಿಆರ್ ಝಡ್-2 ಎಂದು ಪರಿಗಣಿಸಬೇಕು.
ಸ್ಥಳೀಯ ಕಟ್ಟಡ ನಿಯಮಾವಳಿಗಳನ್ನು ಪಾಲಿಸಲು ಅನುಮತಿ ನೀಡಬೇಕು. ಕೇರಳದಲ್ಲಿ ಕರಾವಳಿ ನಿಯಂತ್ರಣ ವಲಯವನ್ನು 50 ಮೀ.ಗೆ ಮಿತಿಗೊಳಿಸಿದಂತೆ ಇಲ್ಲಿನ ಕರಾವಳಿ ಜಿಲ್ಲೆಗಳಲ್ಲು ಮಿತಿ ಗೊಳಿಸಬೇಕು. ಕರಾವಳಿ ನಿಯಂತ್ರಣ ವಲಯದಲ್ಲಿ ಉಲ್ಲಂಘನೆ ಪ್ರಕರಣ ನಿಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಅವಕಾಶ ನೀಡಬೇಕು ಎಂಬ ವಿಷಯಗಳು ಇಂದು ಸಭೆಯಲ್ಲಿ ಪ್ರಸ್ತಾಪಗೊಂಡವು.
ಸಮುದ್ರ ಮಾಲಿನ್ಯ ತಡೆಗೆ, ಸುಸ್ಥಿರ ಮರಳುಗಾರಿಕೆಗೆ ಹಾಗೂ ಜಿಲ್ಲೆಯಲ್ಲಿ ಅಕ್ರಮವಾಗಿ ಸರಕಾರಿ ಜಮೀನಿನ ಒತ್ತುವರಿ ತಡೆಗೆ ಪ್ರತ್ಯೇಕ ಕಾನೂನು ಜಾರಿ ಪಡೆ ಜಾರಿಗೊಳಿಸುವಂತೆ ಶಾಸಕರಾದ ಎನ್ ಯೋಗೀಶ್ ಭಟ್ ಅವರು ಸಲಹೆ ಮಾಡಿದರು. ಸರಕಾರಿ ಭೂಮಿಯ ಅತಿಕ್ರಮಣದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದ ಅವರು, ಬೆಂಗರೆ, ಮೀನಕಳಿಯದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣಗೊಳ್ಳದ ರೀತಿ ನಗರದಲ್ಲಿ ಸರ್ವೇ ಕಾರ್ಯ ನಡೆಸುವ ಹಾಗೆ ಇಲ್ಲೂ ನಡೆಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಸೋಮೇಶ್ವರದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಅಲ್ಲಿಯೂ ಅನಧಿಕೃತ ಕಟ್ಟಡಗಳ ಹಾವಳಿಯಿದೆ; ಸಮುದ್ರಕ್ಕೆ ಹಲವು ಕಂಪೆನಿಗಳು ನೇರವಾಗಿ ತ್ಯಾಜ್ಯ ವನ್ನು ಬಿಡುತ್ತಿರುವ ಬಗ್ಗೆ, ಜಿಲ್ಲೆಯಲ್ಲಿರುವ ದೊಡ್ಡ ದೊಡ್ಡ ಕಂಪೆನಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸುತ್ತಿರುವ ಬಗ್ಗ ಸಭೆಯ ಗಮನಕ್ಕೆ ತಂದರು.
ಇದಕ್ಕೆಂದೇ ಕೇಂದ್ರ ಸರಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಿ ಎಲ್ಲ ತ್ಯಾಜ್ಯಗಳನ್ನು ಶುದ್ಧೀಕರಿಸಿ ಜಲ ಸಂಪನ್ಮೂಲ ಕಲುಷಿತಗೊಳ್ಳದಂತೆ ನೋಡುವ ಹೊಣೆಯನ್ನು ವಹಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು, ಸರಕಾರಿ ಜಮೀನು ಅತಿಕ್ರಮಣ ತಡೆಯಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಸಿ ಆರ್ ಝಡ್ ನ ಎಸಿ ಎಫ್ ಮಹಮ್ಮದ್ ಬ್ಯಾರಿ ಉಪಸ್ಥಿತರಿದ್ದರು.