Friday, November 26, 2010

ತಾಲೂಕು ಕೇಂದ್ರಗಳಲ್ಲೂ ಅಂಗವಿಕಲರ ದೃಢೀಕರಣ ಪತ್ರ ಲಭ್ಯ-ಕೆ.ವಿ.ರಾಜಣ್ಣ

ಮಂಗಳೂರು ನವೆಂಬರ್ 26:ಅಂಗವಿಕಲರು ಅಂಗವಿಕಲತೆ ಬಗ್ಗೆ ದೃಢೀಕರಣ ಪತ್ರಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಅಲೆಯಬೇಕಾಗಿಲ್ಲ ಬದಲಾಗಿ ತಾಲೂಕು ಮಟ್ಟದಲ್ಲಿ ವೈದ್ಯಕೀಯ ಮಂಡಳಿಗಳನ್ನು ರಚಿಸಿ ದೃಢೀಕರಣ ಪತ್ರಗಳನ್ನು ಹಂಚುವ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತರಾದ ಕೆ.ವಿ. ರಾಜಣ್ಣನವರು ತಿಳಿಸಿದ್ದಾರೆ.

ಅವರು ಇಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಂಗವಿಕಲರ ಹಕ್ಕುಗಳ ಅನುಷ್ಠಾನದಲ್ಲಿ ಏನಾದರೂ ತೊಡಕುಗಳು ಇವೆಯೇ ಹಾಗೂ ಗ್ರಾಮೀಣ ಅಂಗವಿಕಲರ ಪುನ:ಶ್ಚೇತನ ಯೋಜನೆ ಎಷ್ಟರಮಟ್ಟಿಗೆ ಅನುಷ್ಠಾನ ಆಗುತ್ತಿದೆ ಎಂಬ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ಮೈಸೂರು ಜಿಲೆಯಲ್ಲಿ 1 ರಿಂದ 10 ನೇ ತರಗತಿಯಲ್ಲಿ 3.63 ಲಕ್ಷ ವಿದ್ಯಾರ್ಥಿಗಳಿದ್ದಾರೆ.ಇವರಲ್ಲಿ 5285 ಜನ ಅಂಗವಿಕಲರಾಗಿದ್ದು, ಇವರನ್ನು ವಿಶೇಷ ಅಗತ್ಯ ಮಕ್ಕಳು ಎಂದು ಪರಿಗಣಿಸಿ ರೂ.1.13 ಕೋಟಿ ವೆಚ್ಚದಲ್ಲಿ ಪಠ್ಯಪುಸ್ತಕ,ಸಮವಸ್ತ್ರ ಮುಂತಾದವುಗಳನ್ನು ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆಯುಕ್ತರಿಗೆ ವಿವರಿಸಿದರು. ಮಂಗಳೂರು ದ.ಕ. ಜಿಲ್ಲೆಯಲ್ಲಿ ಒಟ್ಟು 13813 ಜನ ಅಂಗವಿಕಲರು ಮಾಸಾಶನ ಪಡೆಯುತ್ತಿದ್ದಾರೆ.ಅಂಗವಿಕಲರು ಯಾವುದೇ ಸಾರ್ವಜನಿಕ ಕಚೇರಿಗಳಲ್ಲಿ ತಮ್ಮ ಕೆಲಸದ ನಿಮಿತ್ತ ತೆರಳಿದಾಗ ಅವರು ಅಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೆ ಓಡಾಡಲು ಅನುಕೂಲವಾಗುವಂತೆ ಎಲ್ಲಾ ಕಟ್ಟಡಗಳಲ್ಲಿ ರಾಂಪ್ (ಇಳಿಜಾರು ಕಾಲುದಾರಿ) ನಿರ್ಮಿಸಬೇಕು. ಹೊಸ ಕಟ್ಟಡಗಳಿಗೆ ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ದೃಢೀಕರಣ ನೀಡುವ ಮೊದಲು ಈ ಸೌಲಭ್ಯ ಇದೆಯೇ ಎಂಬುದನ್ನು ಪರಿಶೀಲಿಸಿ ನಂತರ ದೃಢೀಕರಣ ಪತ್ರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 17155ಅಂಗವಿಕಲತೆಯ ಜನರಿದ್ದು, ಇವರಲ್ಲಿ ದೈಹಿಕ ಅಂಗವಿಕಲತೆಯ 7567, ಶ್ರವಣ ದೋಷವುಳ್ಳವರು 1966,ದೃಷ್ಟಿ ದೋಷವುಳ್ಳವರು 952,ಬುದ್ಧಿಮಾಂದ್ಯರು 2036,ಮಾನಸಿಕ ಅಸ್ವಸ್ಥರು 809, ಇತರರು 3825 ಇದ್ದಾರೆ. ಇವರಲ್ಲಿ 15905 ಮಂದಿಗೆ ಗುರುತು ಚೀಟಿ ನೀಡಲಾಗಿದೆ.ಅಂಗವಿಕಲ ವೇತನ ರೂ 400/- ಪಡೆಯುವವರ ಸಂಖ್ಯೆ 10756 ,ರೂ 1000/-ಪಡೆಯುವವರ ಸಂಖ್ಯೆ 3107/- ಆಗಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲೂ ಅವಕಾಶ ಇದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಆಯುಕ್ತರು ಸಲಹೆ ನೀಡಿದರು.
ಸಭೆಯಲ್ಲಿ ಉಪಾಯುಕ್ತ ಇಬ್ರಾಹಿಂ,ಜಿಲ್ಲಾಧಿಕಾರಿ ಸುಬೋಧ್ ಯಾದವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ , ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪುಟ್ಟುಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಶಕುಂತಳಾ ಮತ್ತಿತರರು ಉಪಸ್ಥಿತರಿದ್ದರು.