Friday, November 5, 2010

ರಾಜೀವ್ ಗಾಂಧಿ ನೀರು ಪೂರೈಕೆ ಯೋಜನೆ: ಲೋಕಾಯುಕ್ತ ತನಿಖೆಗೆ ಜಿ.ಪಂ ಸದಸ್ಯರ ಆಗ್ರಹ

ಮಂಗಳೂರು,ನವೆಂಬರ್ 04 : ಕಳಪೆ ಕಾಮಗಾರಿಗಳನ್ನು ನಡೆಸಿ ಸಾರ್ವಜನಿಕರ ಹಣವನ್ನು ಪೋಲು ಮಾಡಿರುವ ಬಗ್ಗೆ ಅದರಲ್ಲೂ ಮುಖ್ಯವಾಗಿ ರಾಜೀವ ಗಾಂಧಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಆಗಿರುವ ಕಾಮಗಾರಿಗಳನ್ನು ಲೋಕಾಯುಕ್ತಕ್ಕೆ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರು ಆಗ್ರಹಪಡಿಸಿದರು.

ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣ ದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿ ಬಗ್ಗೆ ಅಸ ಮಾಧಾನ ವ್ಯಕ್ತ ಪಡಿಸಿದರು. ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆಯಡಿ ಕಡೇಶ್ವಾಲ್ಯದಲ್ಲಿ ರೂ.28 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿಯಿಂದ ಇನ್ನು ನೀರು ಕೊಡುವುದು ಸಾಧ್ಯವಾಗಿಲ್ಲ. ಈ ಬಗ್ಗೆ ಸದನ ಸಮಿತಿ ರಚಿತವಾಗಿದ್ದರು ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಎಂ. ಬಾಬು ಅವರು ವಿಷಯ ಪ್ರಸ್ತಾಪಿಸಿದರು.
ಈ ಬಗ್ಗೆ ಕೈಗೊಂಡ ಕ್ರಮ ಹಾಗೂ ನಿರ್ಮಿತಿ ಕೇಂದ್ರಕ್ಕೆ ಪರಿಹಾರ ನೀಡಬೇಕೆಂದು ಸೂಚಿಸಿದ್ದು, ಕಾಮಗಾರಿ ಪೂರ್ಣಗೊಳಿಸಲು ನಿರ್ಮಿತಿಯವರು ಒಪ್ಪಿಕೊಂಡಿದ್ದಾರೆಂದು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ ಯೋಜೆನಯಡಿ ಪ್ರಗತಿಯಾಗದಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. 2009ರ ಸೆಪ್ಟೆಂಬರ್ ತನಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಂಭವಿಸಿದ ಲೋಪಗಳ ಬಗ್ಗೆಯೂ ಸಿಇಒ ವಿವರಣೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಷಕಿಯರನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಲಾಯಿತು.