Friday, November 12, 2010

ನೀರು ಕಳ್ಳತನಕ್ಕೆ ಕಾದಿದೆ ತಕ್ಕ ಶಿಕ್ಷೆ

ಮಂಗಳೂರು, ನವೆಂಬರ್,12 : ಮಹಾನಗರಪಾಲಿಕೆ ವಿತರಿಸುತ್ತಿರುವ ನೀರಿಗೆ ಮೀಟರ್ ಅಳವಡಿಸಿ ಬಿಲ್ ಪಾವತಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ನೀರಿನ ಕರ ಪಾವತಿಸದಿದ್ದರೆ ಪಾಲಿಕೆಗೆ ಆದಾಯ ಸೋರಿಕೆ ಹಾಗೂ ಅಭಿವೃದ್ಧಿಗೆ ತೊಂದರೆ ಯಾಗಲಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.

ಮಹಾ ನಗರಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತ ನಾಡಿದ ಅವರು, ಅಕ್ರಮ ನೀರಿನ ಸಂಪರ್ಕ ಗಳನ್ನು ಕಿತ್ತೆಸೆಯಲು ಸಮಯ ನಿಗದಿ ಮಾಡಿದ ರಲ್ಲದೆ, ಕಡು ಬಡವರಿಗೆ ಮಹಾ ನಗರಪಾಲಿಕೆ ವತಿಯಿಂದಲೇ ಮೀಟರ್ ಅಳವಡಿಸುವ ವ್ಯವಸ್ಥೆ ಮಾಡಬೇಕು. ಬಡವರ ಹೆಸರಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುವುದನ್ನು ಇದರಿಂದ ತಪ್ಪಿಸಲು ಸಾಧ್ಯ. ಮೀಟರ್ ಅಳವಡಿಕೆಯಿಂದ ಪಾಲಿಕೆಗೆ ನಷ್ಟವಿಲ್ಲ; ಲಾಭವೇ ಆಗಲಿದೆ ಎಂದರು. ಅಧಿಕಾರಿಗಳಿಗೆ ಈ ಬಗ್ಗೆ ಇರುವ ದೂರದೃಷ್ಟಿ ಹಾಗೂ ಕ್ರಿಯಾಯೋಜನೆಯ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಯನ್ನು ಕೇಳಿದರು.
ಜಲಭಾಗ್ಯ ಯೋಜನೆಯಡಿ ಬಡವರಿಗೆ ನೀರು ಸಂಪರ್ಕ ನೀಡಲು ಅವಕಾಶವಿದೆ. ಈ ಅವಕಾಶವನ್ನು ಪಾಲಿಕೆ ಸದುಪಯೋಗ ಪಡಿಸಿ ಅಕ್ರಮ ನೀರು ಸಂಪರ್ಕ ಪಡೆದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದರಲ್ಲದೆ ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಬಗ್ಗೆ, ತುಂಬೆಯಿಂದ ನೀರು ಸರಬರಾಜುಗೊಂಡು 3 ಹಂತದಲ್ಲಿ ಶುದ್ಧೀಕರಣಗೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಪಾಲಿಕೆಯ ವಿವಿಧ ವಿಭಾಗಗಳ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.